Monday 13 July 2015

dhammapada/malavagga/18.9/latenttendenciesofupasakas

ಮೋಹಕ್ಕೆ ಸಮನಾದ ಜಾಲವಿಲ್ಲ

"ರಾಗಕ್ಕೆ ಸಮನಾದ ಅಗ್ನಿಯಿಲ್ಲ,
ದ್ವೇಷಕ್ಕೆ ಸಮನಾದ ಹಿಡಿತವಿಲ್ಲ,
ಮೋಹಕ್ಕೆ ಸಮನಾದ ಜಾಲವಿಲ್ಲ,
ತೃಷ್ಣೆಗೆ ಸಮನಾದ ನದಿಯಿಲ್ಲ."    (251)

ಗಾಥ ಪ್ರಸಂಗ 18:9
ಐವರು ಉಪಾಸಕರ ಪ್ರವೃತ್ತಿಗಳು

            ಭಗವಾನರು ಶ್ರಾವಸ್ತಿಯಲ್ಲಿ ನೆಲೆಸಿರುವಾಗ ಐವರು ಉಪಾಸಕರು ಧಮ್ಮವನ್ನು ಆಲಿಸಲು ಭಗವಾನರಲ್ಲಿಗೆ ಜೇತವನಕ್ಕೆ ಬಂದರು. ಅವರೆಲ್ಲಾ ಭಗವಾನರಿಗೆ ಗೌರವದಿಂದ ವಂದಿಸಿ ಒಂದೆಡೆ ಕುಳಿತರು. ಬುದ್ಧರಲ್ಲಿ ಸ್ವಾರ್ಥತೆಯಾಗಲಿ ಕುಟಿಲತೆಯಾಗಲಿ ಅಣುಮಾತ್ರವೂ ಇರಲಿಲ್ಲ. ಆದ್ದರಿಂದಾಗಿ ಅವರು ಬೋಧಿಸುವಾಗ "ಇಂತಹ ಮನುಷ್ಯ ಕ್ಷತ್ರಿಯ, ಇವನು ಬ್ರಾಹ್ಮಣ, ಈತನು ಶ್ರೀಮಂತ, ಈ ಬಡವ, ಈತನಿಗೆ ಸ್ತುತಿಸುವಂತೆ ಬೋಧಿಸಬೇಕು, ಈತನಿಗೆ ಇದರ ಅಗತ್ಯವಿಲ್ಲ" ಎಂಬಂತಹ ತುಚ್ಛವಾದ ಯೋಚನೆಗಳು ಅವರಲ್ಲಿ ಉದಯಿಸುತ್ತಲೇ ಇರಲಿಲ್ಲ. ಅವರು ಕೇವಲ ಧಮ್ಮವನ್ನು ಗೌರವಿಸುತ್ತಿದ್ದರು. ಅದನ್ನೇ ಪ್ರಧಾನವನ್ನಾಗಿಸುತ್ತಿದ್ದರು. ಅಂತರಿಕ್ಷದಿಂದ ದಿವ್ಯನದಿಯನ್ನು ಕೆಳತರುವಂತೆ ಭವ್ಯವಾಗಿ ಧಮ್ಮವನ್ನು ಬೋಧಿಸುತ್ತಿದ್ದರು.

            ಭಗವಾನರು ಈ ರೀತಿಯಾಗಿ ಬೋಧನೆಯನ್ನು ಪ್ರವಚಿಸುತ್ತಿದ್ದರೂ ಸಹಾ ಆ ಐವರಲ್ಲಿ ಒಬ್ಬನು ನಿದ್ದೆ ಹೋಗಿಬಿಟ್ಟನು. ಎರಡನೆಯವನು ನೆಲದಲ್ಲಿ ಗೆರೆಗಳು ರೇಖಾಚಿತ್ರಗಳನ್ನು ಬಿಡಿಸುತ್ತಿದ್ದನು. ಮೂರನೆಯವನು ಮರವನ್ನು ಅಲ್ಲಾಡಿಸಲು ಪ್ರಯತ್ನಿಸುತ್ತಿದ್ದನು, ನಾಲ್ಕನೆಯವನು ಆಕಾಶವನ್ನು ದಿಟ್ಟಿಸುತ್ತಿದ್ದನು. ಆದರೆ ಐದನೆಯವನು ಮಾತ್ರ ಗೌರವದಿಂದ ಕುಳಿತು ಭಗವಾನರ ಬೋಧನೆಯನ್ನು ಗಮನವಿಟ್ಟು ಏಕಾಗ್ರತೆಯಿಂದ ಅರಿಯುತ್ತ ಕೇಳುತ್ತಿದ್ದನು. ಇವರೆಲ್ಲರ ಚಟುವಟಿಕೆಗಳೆಲ್ಲಾ ಭಂತೆ ಆನಂದರು ಗಮನಿಸುತ್ತಿದ್ದರು. ನಂತರ ಭಗವಾನರಲ್ಲಿ ಹೀಗೆ ಪ್ರಶ್ನಿಸಿದರು: "ಭಗವಾನ್, ತಾವು ಧಮ್ಮವನ್ನು ದಪ್ಪ ಬಿಂದುಗಳ ಮಳೆಯು ಆಕಾಶದಿಂದ ಬೀಳುವಂತೆ ಬೋಧಿಸುತ್ತಿದ್ದರೂ ಈ ಐವರಲ್ಲಿ ಒಬ್ಬ ಮಾತ್ರ ಸರಿಯಾಗಿ ಆಲಿಸಿದನು. ಆದರೆ ಉಳಿದವರು ಹಾಗೆ ಆಲಿಸಲೇ ಇಲ್ಲ, ಇದಕ್ಕೆ ಕಾರಣವೇನೆಂದು ತಾವೇ ತಿಳಿಸಬೇಕು."
            ಆಗ ಭಗವಾನರು ಪೂಜ್ಯ ಆನಂದರಿಗೆ ಹೀಗೆ ವಿವರಿಸಿದರು: "ಆನಂದ, ಈ ಉಪಾಸಕರು ತಮ್ಮ ಹಿಂದಿನ ಪ್ರವೃತ್ತಿಗಳನ್ನು ಬಿಡದೆ ಹೋದರು. ಇದೆಲ್ಲಕ್ಕೂ ಅವರ ಹಿಂದಿನ ಜನ್ಮಕ್ಕೂ ಅಪಾರ ಸಂಬಂಧವಿದೆ. ಇದರಲ್ಲಿ ಮೊದಲನೆಯವ ಹಿಂದಿನ ಜನ್ಮದಲ್ಲಿ ಸರ್ಪವಾಗಿದ್ದನು, ಹೀಗಾಗಿಯೇ ಆತನು ಸರ್ಪದಂತೆ ನಿದ್ರೆಗೆ ಜಾರುತ್ತಿದ್ದನು. ಇಲ್ಲಿ ಎರಡನೆಯವ ಅಂದರೆ ನೆಲದಮೇಲೆ ಗೀಚುತ್ತಿದ್ದವ ಹಿಂದಿನ ಜನ್ಮದಲ್ಲಿ ಎರೆಹುಳುವಾಗಿದ್ದನು. ಇಲ್ಲಿ ಮೂರನೆಯವ ಅಂದರೆ ಮರವನ್ನು ಅಲ್ಲಾಡಿಸುತ್ತಿದ್ದವನು ಹಿಂದಿನ ಜನ್ಮದಲ್ಲಿ ಕೋತಿಯಾಗಿದ್ದನು. ಇಲ್ಲಿ ನಾಲ್ಕನೆಯವನಾದ ಆಕಾಶವನ್ನು ದಿಟ್ಟಿಸುತ್ತಿದ್ದವನು ಹಿಂದಿನ ಜನ್ಮದಲ್ಲಿ ಖಗೋಳ ಶಾಸ್ತ್ರಜ್ಞನಾಗಿದ್ದನು ಮತ್ತು ಇಲ್ಲಿ ಧಮ್ಮವನ್ನು ಚೆನ್ನಾಗಿ ಕೇಳುತ್ತಿದ್ದವನು ಹಿಂದಿನ ಜನ್ಮದಲ್ಲಿ ವಿದ್ವಾಂಸ ಬ್ರಾಹ್ಮಣನಾಗಿದ್ದನು. ಆನಂದ, ಧಮ್ಮವು ಅರ್ಥವಾಗಬೇಕಾದರೆ ಗಮನವಿಟ್ಟು ಆಲಿಸುವುದು ಅತಿಮುಖ್ಯವಾಗಿದೆ. ಆದರೆ ಬಹಳಷ್ಟು ಜನರು ಧಮ್ಮವನ್ನು ಅರ್ಥಮಾಡಿಕೊಳ್ಳುವುದಿಲ್ಲ ಹಾಗು ಪಾಲಿಸುವುದಿಲ್ಲ."

            ಆಗ ಆನಂದರು ಹೀಗೆ ಪ್ರಶ್ನಿಸಿದರು: "ಭಗವಾನ್, ಇವರಲ್ಲಿ ಹೀಗೆ ಧಮ್ಮವನ್ನು ಆಲಿಸದಂತೆ ಮಾಡುವುದು ಯಾವುವು?" ಆಗ ಭಗವಾನರು ಹೀಗೆ ಉತ್ತರಿಸಿದರು: "ಆನಂದ, ಅವರನ್ನು ಧಮ್ಮವಾಲಿಸದಂತೆ, ಅರ್ಥವಾಗದಂತೆ ಮಾಡುವಂತಹುದು ಯಾವುವೆಂದರೆ: ಲೋಭದಿಂದಾಗಿ, ದ್ವೇಷದಿಂದಾಗಿ, ಮೋಹದಿಂದಾಗಿಯೇ ಆಗಿದೆ. ಏಕೆಂದರೆ ರಾಗಕ್ಕೆ ಸಮನಾದ ಅಗ್ನಿಯಿಲ್ಲ, ಅದು ಜನರನ್ನು ಸುಟ್ಟು ಬೂದಿಯನ್ನು ಉಳಿಸುವಂತೆ ಮಾಡುವುದು. ಪ್ರಳಯ ಕಾಲದಲ್ಲಿಯು ಸೂರ್ಯನು ಕಾಣಿಸಿಕೊಂಡು ಇಡೀ ಸೌರವ್ಯೂಹದ ಆಕಾಶ ಕಾಯಗಳೆಲ್ಲಾ ಸುಟ್ಟು ಹೋಗುವುವು. ಸಾಧಾರಣ ಬೆಂಕಿಯು ಸಹಾ ಕಾಲಕ್ಕೆ ಮತ್ತು ವಾತಾವರಣಕ್ಕೆ ಅನುಗುಣವಾಗಿಯೇ ಸುಡುತ್ತದೆ. ಆದರೆ ರಾಗಕ್ಕೆ ಕಾಲವೇ ಇಲ್ಲದಂತಾಗಿದೆ. ಉದಯಿಸಿದಾಗೆಲ್ಲಾ ಸುಟ್ಟು ಸುಟ್ಟುಹಾಕುತ್ತದೆ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು. ಈ ಗಾಥೆಯ ಅಂತ್ಯದಲ್ಲಿ ಗಂಭೀರವಾಗಿ ಆಲಿಸುತ್ತ, ಅರ್ಥಮಾಡಿಕೊಳ್ಳುತ್ತಿದ್ದವನು ಸೋತಪತ್ತಿ ಫಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟನು.

No comments:

Post a Comment