Saturday 25 July 2015

dhammapada/dhammatthavagga/19.9/ariya

ಪ್ರಾಣಿಗಳನ್ನು ಹಿಂಸಿಸುವವನು ಆರ್ಯನಲ್ಲ (ಶ್ರೇಷ್ಠನಲ್ಲ)

"ಪ್ರಾಣಿಗಳನ್ನು ಹಿಂಸಿಸುವವನು ಆರ್ಯನಲ್ಲ,
ಸರ್ವ ಪ್ರಾಣಿಗಳೊಂದಿಗೆ ಅಹಿಂಸೆಯಲ್ಲಿರುವವನೇ         
ಶ್ರೇಷ್ಠನೆಂದು (ಆರ್ಯನೆಂದು) ಕರೆಯಲ್ಪಡುತ್ತಾನೆ."        (270)

ಗಾಥ ಪ್ರಸಂಗ 19:9
ಆರ್ಯನೆಂಬ (ಆರಿಯಾ) ಮೀನುಗಾರನ ಪ್ರಸಂಗ
            ಆಗ ಭಗವಾನರು ಶ್ರಾವಸ್ತಿಯ ಜೇತವನದಲ್ಲಿದ್ದರು. ಅಂದು ಮುಂಜಾನೆಯೇ ಭಗವಾನರಿಗೆ ಇಂದು ಆರ್ಯನೆಂಬ ಮೀನುಗಾರನು ಸೋತಪತ್ತಿ ಫಲ ಪಡೆಯುವನು ಎಂದು ಮಹಾ ಕರುಣಾ ಸಮಾಪತ್ತಿಯಲ್ಲಿ ತಿಳಿಯಿತು.

            ಶ್ರಾವಸ್ತಿಯ ಉತ್ತರ ದ್ವಾರದ ಬಳಿ ಆರಿಯಾನೆಂಬ ಮೀನುಗಾರನಿದ್ದನು. ಆತನ ಬಳಿಗೆ ಭಗವಾನರು ಅಂದು ಊಟ ಮುಗಿಸಿಕೊಂಡು, ಭಿಕ್ಷುಗಳ ಸಮೇತ, ಆತನು ಮೀನುಗಳು ಹಿಡಿಯುತ್ತಿದ್ದಂತಹ ಸ್ಥಳಕ್ಕೆ ಬಂದು ಅಲ್ಲಿ ನಿಂತರು. ಆರಿಯಾನು ಭಗವಾನರನ್ನು ಕಂಡಕೂಡಲೇ ಆತನಲ್ಲಿ ಪಾಪಲಜ್ಜೆ ಮತ್ತು ಪಾಪಭೀತಿಗಳು ಉಂಟಾಗಿ ತಕ್ಷಣ ಆತನು ಮೀನು ಹಿಡಿಯುತ್ತಿದ್ದಂತಹ ಗಾಳವನ್ನು ಎಸೆದು, ಭಗವಾನರ ಬಳಿಗೆ ಬಂದು ನಿಂತನು. ಆಗ ಭಗವಾನರು ಅಲ್ಲಿ ಇದ್ದಂತಹ ಭಿಕ್ಷುಗಳ ಹೆಸರುಗಳನ್ನು ಕೇಳತೊಡಗಿದರು. ಅವರೆಲ್ಲ ತಮ್ಮ ತಮ್ಮ ಹೆಸರುಗಳನ್ನು ತಿಳಿಸುತ್ತಾ ಹೋದರು. ಕೊನೆಗೆ ಭಗವಾನರು ಆರಿಯಾನನ್ನು "ನಿನ್ನ ಹೆಸರೇನು?" ಎಂದು ಕೇಳಿದರು. ಅದಕ್ಕೆ ಆತನು "ಆರಿಯಾ" ಎಂದನು. ಆಗ ಭಗವಾನರು ಆತನಿಗೆ ಹೀಗೆ ನುಡಿದರು: "ಶ್ರೇಷ್ಠರು (ಆರಿಯಾ) ಜೀವಹಿಂಸೆ ಮಾಡುವುದಿಲ್ಲ. ಆದರೆ ನೀನು ಶ್ರೇಷ್ಠನೆಂದು (ಆರಿಯಾನೆಂದು) ಹೆಸರನ್ನು ಹೊಂದಿಯೂ ಸಹಾ ಜೀವಹಿಂಸೆ ಮಾಡುವುದು ಸರಿಯಲ್ಲ. ಕೊನೇ ಪಕ್ಷ ಹೆಸರಿಗೆ ತಕ್ಕಂತೆ ಜೀವಿಸಬೇಕಷ್ಟೇ" ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.
 

No comments:

Post a Comment