Monday 13 July 2015

dhammapada/malavagga/18.1/butcher

    18.ಮಲ ವಗ್ಗ (ಮಲ ವರ್ಗ)
ನಿನ್ನನ್ನು ನೀನು ದೀಪವನ್ನಾಗಿ ಮಾಡಿಕೋ

"ನೀನು ಈಗ ಶಿಥಿಲವಾದ ಎಲೆಯಂತೆ ಆಗಿರುವೆ,
ಯಮ ಪುರುಷರು ನಿನ್ನ ಹತ್ತಿರವಿರುವರು,
ನೀನು ಬೀಳ್ಗೊಡೆಯ ಅಂತಿಮಾಸ್ಥೆಯಲ್ಲಿ ನಿಂತಿರುವೆ,
ಆದರೂ ನೀನು ಹಾದಿಗೆ ಬೇಕಾದ ಬುತ್ತಿಯನ್ನು ಕಟ್ಟಿಕೊಂಡಿಲ್ಲವಲ್ಲಾ!" (235)


"ನಿನ್ನನ್ನು ನೀನು ದೀಪವನ್ನಾಗಿ ಮಾಡಿಕೋ,
ಶೀಘ್ರವಾಗಿ ಶ್ರಮಿಸು ಮತ್ತು ಪಂಡಿತನಾಗು;
ಮಲಗಳಿಂದ ಶುಭ್ರನಾಗು, ಕ್ಲೇಷ ನೋವುಗಳಿಂದ ಮುಕ್ತನಾಗು
ಆಗ ನೀನು ಆರ್ಯರ ಭೂಮಿಯನ್ನು (ಲೋಕೋತ್ತರ ಫಲಗಳಲ್ಲಿ) ಪ್ರವೇಶಿಸುವೆ   (236)

"ನಿನ್ನ ಅಂತ್ಯಕಾಲ ಅತಿ ಹತ್ತಿರ ಬಂದಿದೆ
ನೀನು ಯಮನ (ಮರಣದ) ಹತ್ತಿರ ಬಂದಿರುವೆ
ದಾರಿಯಲ್ಲಿ ನಿನಗೆ ವಿಶ್ರಾಂತಿಯೇ ಇಲ್ಲ
ಆದರೂ ನಿನ್ನ ಹಾದಿಗೆ ಬೇಕಾದ ಬುತ್ತಿಯನ್ನು ಕಟ್ಟಿಕೊಂಡಿಲ್ಲವಲ್ಲಾ!"   (237)

"ನಿನ್ನನ್ನು ನೀನು ದೀಪವನ್ನಾಗಿ ಮಾಡಿಕೋ,
ಶೀಘ್ರವಾಗಿ ಶ್ರಮಿಸು ಮತ್ತು ಪಂಡಿತನಾಗು
ಮಲಗಳಿಂದ ಶುಭ್ರನಾಗು, ಕ್ಲೇಷ ನೋವುಗಳಿಂದ ಮುಕ್ತನಾಗು
ಆಗ ನೀನು ಮತ್ತೆ ಜನ್ಮ ಜರಾಗಳನ್ನು ಅನುಭವಿಸಲಾರೆ" (238)

ಗಾಥ ಪ್ರಸಂಗ 18:1
ಕಸಾಯಿಯವನ ಮಗ
            ಶ್ರಾವಸ್ಥಿಯಲ್ಲಿ ಕಸಾಯಿಯವನಿದ್ದನು. ಆತನು ಹಸುಗಳನ್ನು ಕೊಂದು ಮಾಂಸ ಮಾರುತ್ತಿದ್ದನು. ಆತನು ಹಸುಗಳನ್ನು ಕೊಂದು ತನಗೆ ಬೇಕಾದ ಮಾಂಸದ ಭಾಗಗಳನ್ನು ಕತ್ತರಿಸಿ ಬೇರೆಯಾಗಿ ಇಟ್ಟುಕೊಂಡು, ಹಾಗೆಯೇ ಹೆಂಡತಿ ಮಕ್ಕಳಿಗಾಗಿ ಇಟ್ಟುಕೊಂಡು ಉಳಿದುದ್ದನ್ನು ಮಾರುತ್ತಿದ್ದನು. ಆತನು ಮಾಂಸವಿಲ್ಲದೆ ಊಟವನ್ನೇ ತಿನ್ನುತ್ತಿರಲಿಲ್ಲ. ಹೀಗೆಯೇ ಆತನು 55 ವರ್ಷಗಳನ್ನು ಕಳೆದನು. ಆತನ ಮನೆಯ ಪಕ್ಕದಲ್ಲೇ ವಿಹಾರವಿದ್ದರೂ ಸಹಾ ಆತನು ಚಮಚೆಯಷ್ಟು ಸಹಾ ದಾನ ಮಾಡಲಿಲ್ಲ. ಒಂದುದಿನ ಆತನು ಬೆಳಕಿರುವಾಗಲೇ ದನದ ಮಾಂಸವನ್ನು ಮನೆಗೆ ತಂದನು. ತನ್ನ ಹೆಂಡತಿಗೆ ಅಡುಗೆ ಮಾಡುವಂತೆ ಹೇಳಿ ಸ್ನಾನಕ್ಕಾಗಿ ಕೊಳಕ್ಕೆ ಹೊರಟನು. ಆತನು ಮನೆಯಲ್ಲಿ ಇಲ್ಲದಿರುವಾಗ ಆತನ ಸ್ನೇಹಿತರು ಕಸಾಯಿಯವನ ಹೆಂಡತಿಗೆ ಹೀಗೆ ಕೇಳಿದರು. "ಸ್ವಲ್ಪ ಮಾಂಸವನ್ನು ನೀಡಿರಿ, ನಮ್ಮ ಮನೆಗೆ ನೆಂಟರು ಬಂದಿದ್ದಾರೆ."
            "ನಮ್ಮ ಬಳಿ ಮಾರಲು ಮಾಂಸವಿಲ್ಲ, ನಿಮ್ಮ ಮಿತ್ರರು ಎಲ್ಲಾ ಮಾಂಸ ಮಾರಿ, ಈಗ ಸ್ನಾನಕ್ಕೆ ಕೊಳದ ಬಳಿಗೆ ಹೋಗಿದ್ದಾರೆ."
            "ದಯವಿಟ್ಟು ನನ್ನ ಕೋರಿಕೆ ನಿರಾಕರಿಸಬೇಡಿ, ನಿಮ್ಮ ಮನೆಯಲ್ಲಿ ಒಂದು ತುಂಡು ಮಾಂಸವಿದ್ದರೂ ನೀಡಿ."
            "ನಮ್ಮಲ್ಲಿ ಒಂದು ತುಂಡು ಮಾಂಸವೂ ಇಲ್ಲ, ಕೇವಲ ನಮ್ಮ ಯಜಮಾನರು ತಿನ್ನಲು ಇಟ್ಟುಕೊಂಡಿರುವ ಮಾಂಸ ಮಾತ್ರವಿದೆ. ಅವರು ಮಾಂಸವಿಲ್ಲದೆ ಅನ್ನವನ್ನೇ ಮುಟ್ಟರು, ಅವರು ಖಂಡಿತವಾಗಿ ನಿಮಗೆ ಮಾಂಸ ನೀಡಲಾರರು."
          
  ಆಗ ಕಸಾಯಿಯವನ ಸ್ನೇಹಿತನು ಇಷ್ಟು ಹೇಳಿದ ಮೇಲೆಯೂ ಲೆಕ್ಕಿಸದೆ, ತಾನೇ ಆ ಮಾಂಸವನ್ನು ಬಲವಂತದಿಂದ ಎತ್ತಿಕೊಂಡು ಹೊರಟನು.
            ಕಸಾಯಿಯವನು ಸ್ನಾನ ಮುಗಿಸಿ ಮನೆಗೆ ಹಿಂತಿರುಗಿದನು. ಆಗ ಹೆಂಡತಿಯು ಆಹಾರ ಬಡಿಸಿದಳು. "ಮಾಂಸವೆಲ್ಲಿ?" ಎಂದು ಗಂಡನು ಪ್ರಶ್ನಿಸಿದನು. ಆಕೆ ನಡೆದ ವಿಷಯವೆಲ್ಲಾ ತಿಳಿಸಿದಳು. ಆಗ ಕಸಾಯಿಯವನಿಗೆ ಮಾಂಸವಿಲ್ಲದೆ ಆಕ್ರೋಷ ಹೆಚ್ಚಿತು. ಆತನು ಆಹಾರವನ್ನು ತಿನ್ನದೆ, ಮಾಂಸಕ್ಕಾಗಿ ಕೈಯಲ್ಲಿ ಚೂರಿ ಹಿಡಿದು ಮನೆಯಿಂದ ಹೊರನಡೆದನು.
            ಆತನ ಮನೆಯ ಹಿಂಭಾಗದಲ್ಲಿ ಎತ್ತನ್ನು ಕಟ್ಟಿಹಾಕಿದ್ದನು. ಆತನು ನೇರವಾಗಿ ಎತ್ತಿನ ಬಳಿಗೆ ಹೋದನು. ನಂತರ ತನ್ನ ಎಡಗೈಯಿಂದ ಆ ಎತ್ತಿನ ಬಾಯಿಗೆ ಕೈಹಾಕಿ ಅದರ ನಾಲಿಗೆಯನ್ನು ಎಷ್ಟು ಸಾಧ್ಯವೋ ಅಷ್ಟು ಎಳೆದನು. ನಂತರ ತನ್ನ ಬಲಗೈಯಲ್ಲಿದ್ದ ಚೂರಿಯಿಂದ ಆ ನಾಲಿಗೆಯನ್ನು ಕತ್ತರಿಸಿ ಹಾಕಿ, ಮನೆಗೆ ಹಿಂತಿರುಗಿದನು. ನಂತರ ಇದ್ದಿಲ ಮೇಲೆ ಸುಟ್ಟು ಆಹಾರದ ಜೊತೆಗೆ ಇಟ್ಟುಕೊಂಡು ಕುಳಿತನು. ನಂತರ ಸ್ವಲ್ಪ ಅನ್ನವನ್ನು ತಿಂದನು. ಬಳಿಕ ಆ ನಾಲಿಗೆಯ ಮಾಂಸವನ್ನು ತಿನ್ನಲು ಹೊರಟನು. ಅದೇ ಕ್ಷಣದಲ್ಲಿ ಆತನು ತನ್ನ ನಾಲಿಗೆಯನ್ನೇ ಕಚ್ಚಿ ಕತ್ತರಿಸಿಕೊಂಡು ಅದೇ ಪಾತ್ರೆಯಲ್ಲಿ ತನ್ನ ನಾಲಿಗೆಯ ತುಂಡು ಬಿದ್ದಿತು. ರಕ್ತವು ಧಾರಾಕಾರವಾಗಿ ಹರಿಯಿತು. ಆತನು ಆ ಎತ್ತಿಗೆ ಮಾಡಿದ ಪಾಪಕ್ಕೆ ತಕ್ಕ ಫಲ ಈ ಜನ್ಮದಲ್ಲೇ ಅದೇ ದಿನದಂದೇ ಆತನಿಗೆ ಸಿಕ್ಕಿತ್ತು. ನೋವು ತಡೆಯಲಾರದೆ ಆತನು ಮನೆಯ ಅಂಗಳದಲ್ಲಿ ಆ ಎತ್ತಿನಂತೆಯೇ ಅಂಗೈ ಮತ್ತು ಮೊಣಕಾಲಿನಿಂದ ತೆವಳತೊಡಗಿದನು. ಆ ಎತ್ತಿನಂತೆಯೇ ಆತನು ಬೊಬ್ಬೆ ಹಾಕತೊಡಗಿದನು.
            ಆತನ ಹೆಂಡತಿಗೆ ಏನು ಮಾಡಬೇಕೆಂಬುದೇ ಅರ್ಥವಾಗಲಿಲ್ಲ. ಆತನ ಹೆಂಡತಿಯು ತನ್ನ ಮಗನಿಗೆ ಹೀಗೆ ಹೇಳಿದಳು: "ಮಗು, ನಿನ್ನ ತಂದೆ ಮನೆಯಲ್ಲೆಲ್ಲಾ ತೆವಳುತ್ತಾ, ಬೊಬ್ಬೆಯಿಡುತ್ತಾ, ರಕ್ತಕಾರುತ್ತಾ ಇದ್ದಾನೆ. ಆ ಎತ್ತಿನಂತೆಯೇ ನೋವನ್ನು ಪಡುತ್ತಿದ್ದಾನೆ, ಯಾರಿಗೆ ಗೊತ್ತು, ಈ ಆರೋಪ ನಿನ್ನ ಮೇಲೆ ಬಂದರೂ ಬರಬಹುದು, ನನ್ನ ಬಗ್ಗೆ ಯೋಚಿಸಬೇಡ, ನೀನು ಸುರಕ್ಷಿತ ಸ್ಥಾನಕ್ಕೆ ತಲುಪಿಬಿಡು" ಎಂದಳು.

            ಆಕೆಯ ಮಗನು ಸಹಾ ಗಾಬರಿಗೊಂಡಿದ್ದನು. ಆತನು ತಾಯಿಗೆ ವಿದಾಯ ಹೇಳಿ ಭಯದಿಂದಾಗಿ ಆ ಊರನ್ನೇ ಬಿಟ್ಟು ತಕ್ಷಶಿಲ ನಗರಕ್ಕೆ ಬಂದನು.
            ಇತ್ತ ಆ ಎತ್ತು ಸತ್ತಿತು. ಅದೇರೀತಿಯಲ್ಲಿಯೇ ರಕ್ತಕಾರುತ್ತಾ, ಬೊಬ್ಬೆಯಿಟ್ಟು, ತೆವಳಾಡಿ ಆ ಕಸಾಯಿಯವನು ಸತ್ತು ಅವೀಚಿ ನರಕದಲ್ಲಿ ಹುಟ್ಟಿದನು.
            ಇತ್ತ ಕಸಾಯಿಯವನ ಮಗನು, ತಕ್ಷಶಿಲೆಯಲ್ಲಿ ಅಕ್ಕಸಾಲಿಗನ ಬಳಿಯಲ್ಲಿ ಕೆಲಸಕ್ಕೆ ಸೇರಿದನು. ಕೆಲವಾರಗಳ ನಂತರ ಆ ವೃತ್ತಿಯನ್ನು ಕಲಿತನು. ಒಂದುದಿನ ಅಕ್ಕಸಾಲಿಗನು ಈತನಿಗೆ ಕೆಲ ಆಭರಣಗಳನ್ನು ನೀಡಿ ತಲುಪಿಸಬೇಕಾದ ಸ್ಥಳಗಳನ್ನು ತಿಳಿಸಿದನು. ಆಗ ಕಸಾಯಿಯವನ ಮಗನು ಪ್ರಾಮಾಣಿಕತೆಯಿಂದ ಆ ಆಭರಣಗಳನ್ನೆಲ್ಲಾ ತಲುಪಿಸಬೇಕಾದವರಿಗೆ ತಲುಪಿಸಿದನು. ಇದರಿಂದ ಅಕ್ಕಸಾಲಿಗನು ಸಂತೋಷಗೊಂಡನು. ಕೆಲವರ್ಷಗಳ ನಂತರ ಆ ಅಕ್ಕಸಾಲಿಗನು ಆ ಕಸಾಯಿಪುತ್ರನಿಗೆ ತನ್ನ ಮಗಳನ್ನು ನೀಡಿ ವಿವಾಹವನ್ನು ಮಾಡಿದನು.

            ನಂತರ ಕಸಾಯಿಯವನ ಮಗನಿಗೆ ಅನೇಕ ಮಕ್ಕಳು ಹುಟ್ಟಿದರು. ಆ ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾದರು. ಅವರು ಬುದ್ಧರ ಉಪಾಸಕರಾದರು. ಅವರು ತಮ್ಮ ತಂದೆಯನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಕಸಾಯಿಪುತ್ರನು ಈಗ ವೃದ್ಧನಾಗತೊಡಗಿದನು. ಆದರೂ ಆತನು ಯಾವುದೇ ಪುಣ್ಯಕಾರ್ಯ ಮಾಡಿರಲಿಲ್ಲ. ಹೀಗಾಗಿ ಆ ಮಕ್ಕಳು ಹೀಗೆ ಚಿಂತನೆ ಮಾಡಿದರು, "ನಮ್ಮ ತಂದೆಯವರ ಪಾಲಿಗೆ ದಾನ ಫಲ ಹಂಚೋಣ." ಅದರಂತೆಯೇ ಅವರು ಭಗವಾನರನ್ನು ಮತ್ತು ಭಿಕ್ಷು ಸಂಘವನ್ನು ಆಹಾರಕ್ಕಾಗಿ ಆಹ್ವಾನಿಸಿದರು. ಹಾಗು ಭಕ್ತಿಯಿಂದ ಅವರೆಲ್ಲರಿಗೂ ಬಡಿಸಿದರು. ನಂತರ ಇದರ ಪುಣ್ಯವೆಲ್ಲ ತಮ್ಮ ತಂದೆಗೆ ಸೇರಬೇಕೆಂದು ಆಶಿಸಿದರು. ನಂತರ ಭಗವಾನರು ಆ ಕಸಾಯಿಪುತ್ರನಿಗೆ ಹೀಗೆ ಹೇಳಿದರು: "ಓ ಉಪಾಸಕನೇ, ನೀನು ವೃದ್ಧನಾಗಿದ್ದೀಯೆ, ನಿನ್ನ ದೇಹ ಜೀರ್ಣವಾಗಿದೆ, ಹಣ್ಣೆಲೆಯಂತೆ ಇದ್ದೀಯೆ, ಆದರೂ ಸಹಾ ನೀನು ಪರಲೋಕಕ್ಕಾಗಿ ಯಾವುದೇ ಪುಣ್ಯವನ್ನು ಮಾಡಿಲ್ಲ. ಹೇಗೆ ಪ್ರಯಾಣಿಕರು ಪ್ರಯಾಣ ಬೆಳೆಸುವಾಗ ಬುತ್ತಿಯನ್ನು ತೆಗೆದುಕೊಂಡು ಹೋಗುವರೋ ಹಾಗೇ ನೀನೇನೂ ಪುಣ್ಯ ಬುತ್ತಿಯನ್ನು ಸಂಗ್ರಹಿಸುತ್ತಿಲ್ಲವಲ್ಲ! ಆದ್ದರಿಂದ ಓ ಉಪಾಸಕನೇ, ನಿನ್ನನ್ನು ನೀನು ದೀಪವನ್ನಾಗಿಸು, ಜ್ಞಾನಿಯಾಗು, ದಡ್ಡನಾಗಬೇಡ" ಎಂದು ನುಡಿದು ಈ ಮೇಲಿನ ಗಾಥೆಗಳನ್ನು ನುಡಿದರು. ಪರಿಣಾಮವಶಾತ್ ಆತನು ಸೋತಪತ್ತಿ ಫಲದಲ್ಲಿ ಪ್ರತಿಷ್ಠಾಪಿಸಲ್ಪಟ್ಟನು. 

No comments:

Post a Comment