Friday 3 July 2015

dhammapada/kodhavagga/17.2/rukkhadevataa

ಉಕ್ಕುವ ಕೋಪವ ತಡೆ

"ಉತ್ಪತ್ತಿಯಾಗಿ ಉಕ್ಕುತ್ತಿರುವ ಕ್ರೋಧವನ್ನು
ವೇಗವಾಗಿ ಓಡುತ್ತಿರುವ ರಥವನ್ನು ನಿಲ್ಲಿಸುವಂತೆ
ಪರೀಕ್ಷಿಸುತ್ತಾ ನಿಗ್ರಹಿಸುವವನ್ನೇ ಸಾರಥಿ ಎನ್ನುತ್ತೇನೆ
ಇತರ ಜನರು ಕೇವಲ ಕಡಿವಾಣ ಹಿಡಿದಿದ್ದಾರೆ."              (222)


ಗಾಥ ಪ್ರಸಂಗ 17:2
ವೃಕ್ಷದೇವತೆಯ ಕೋಪ ನಿಗ್ರಹ

            ಒಮ್ಮೆ ಅಳವಿಯ ಭಿಕ್ಷುವೊಬ್ಬನು ತನ್ನ ವಾಸಸ್ಥಳ ತಾನೇ ನಿಮರ್ಿಸಲು ನಿರ್ಧರಿಸಿದನು. ಹಾಗು ಆತನಿಗೆ ಮರವೊಂದು ಇಷ್ಟವಾಗಿ ಅದನ್ನು ಕತ್ತರಿಸಲು ಮುಂದಾದನು. ಅಲ್ಲಿ ವೃಕ್ಷದೇವತೆಯೊಂದು ವಾಸವಾಗಿತ್ತು. ಅದಕ್ಕೆ ಶಿಶುವೂ ಸಹಾ ಇತ್ತು. ಅದು ಆ ಭಿಕ್ಷುವಿನ ಮುಂದೆ ಪ್ರತ್ಯಕ್ಷವಾಗಿ ಹೀಗೆ ಹೇಳಿತು: "ಪೂಜ್ಯರೇ, ನನ್ನ ಮನೆಯನ್ನು ಕತ್ತರಿಸದಿರಿ, ನಾನು ನನ್ನ ಮಗುವಿನೊಂದಿಗೆ, ಇನ್ನೊಂದು ಮನೆಗಾಗಿ ಹುಡುಕುವುದು ಅತಿಕಷ್ಟವಾಗುವುದು."
            ಆದರೆ ಆ ಭಿಕ್ಷುವು ಹೀಗೆ ಹೇಳಿದನು: ನನಗೆ ಇಂತಹ ಮರವು ಸಿಗುವುದು ಅತಿ ಕಷ್ಟಕರವಾಗಿ ತೋರುತ್ತದೆ" ಎಂದು ಹೇಳುತ್ತಾ ಆತನು ವೃಕ್ಷದೇವತೆಯ ಕಡೆಗೆ ಗಮನವೇ ನೀಡಲಿಲ್ಲ. 'ಬಹುಶಃ ಈತನು ನನ್ನ ಮಗುವನ್ನು ನೋಡಿದರೆ ಬಿಟ್ಟುಬಿಡಬಹುದು' ಎಂದು ಆ ವೃಕ್ಷದೇವತೆಯು ಆ ಮಗುವನ್ನು ರೆಂಬೆಯ ಮೇಲಿಟ್ಟಳು. ಆದರೆ ಆಗಲೇ ಆ ಭಿಕ್ಷುವು ಕೊಡಲಿಯನ್ನು ಬೀಸಿಬಿಟ್ಟಿದ್ದನು. ಹೀಗಾಗಿ ಆತನು ನಿಯಂತ್ರಿಸಲಾಗದೆ ಆ ಮಗುವಿನ ಕೈಯನ್ನು ಕತ್ತರಿಸಿಬಿಟ್ಟನು. ಆಗ ಆ ವೃಕ್ಷದೇವತೆಗೆ ಆಘಾತವಾಗಿ, ಅಷ್ಟೇ ಕೋಪವುಂಟಾಗಿ 'ಈತನು ಸಾಯುವಂತೆ ಹೊಡೆಯುವೆನು' ಎನ್ನುತ್ತಾ ಎರಡು ಕೈಗಳನ್ನೂ ಮೇಲೆತ್ತಿದಳು. ಆ ಕ್ಷಣದಲ್ಲೇ ಆಕೆಯಲ್ಲಿದ್ದ ಒಳ್ಳೆಯತನವು ಆಕೆಗೆ ಕ್ಷಣಕಾಲ ಹೀಗೆ ಯೋಚಿಸುವಂತೆ ಮಾಡಿತು: 'ಭಿಕ್ಷುಗಳು ಶೀಲವಂತರಾಗಿರುತ್ತಾರೆ, ಹೀಗಾಗಿ ನಾನು ಈತನನ್ನು ಹೊಡೆದರೆ ನಾನು ನರಕಕ್ಕೆ ಹೋಗುವುದು ಶತಸಿದ್ಧವಾಗುತ್ತದೆ. ಅಷ್ಟೇ ಅಲ್ಲದೆ ಬೇರೆಕಡೆಯೂ ಸಹಾ ನನ್ನದೇ ಉದಾಹರಣೆಯಿಂದ ಭಿಕ್ಷುಗಳು ಬಹುಶಃ ತಪ್ಪು ಮಾಡಿದರೆ ಅವರಿಗೆ ಕೊಲ್ಲುತ್ತಾರೆ. ಈ ಭಿಕ್ಷುಗಳಿಗೆ ನಾಯಕರು ಖಂಡಿತವಾಗಿ ಇದ್ದಾರೆ. ಆದ್ದರಿಂದ ಈ ವಿಷಯವನ್ನು ಅವರಿಗೆ ಹೇಳುವುದೇ ಉತ್ತಮವಾದುದು" ಎಂದು ಯೋಚಿಸಿ ಆ ವೃಕ್ಷದೇವತೆಯು ತನ್ನ ಕೋಪವನ್ನು ನಿಗ್ರಹಿಸಿಕೊಂಡು ಅಳುತ್ತಾ ಬುದ್ಧರಲ್ಲಿಗೆ ಹೋದಳು. ಭಗವಾನರಿಗೆ ವಂದಿಸಿ ಒಂದೆಡೆ ನಿಂತಳು. ಆಗ ಭಗವಾನರು "ದೇವತೆ ಏನು ವಿಷಯ?" ಎಂದಾಗ ಆ ದೇವತೆಯು ನಡೆದ ವಿಷಯವೆಲ್ಲಾ ನುಡಿದಳು. ನಂತರ ಹೀಗೆ ಹೇಳಿದಳು: "ಭಂತೆ, ನಿಮ್ಮ ಶಿಷ್ಯ ನನಗೆ ಹೀಗೆ ಮಾಡಿರುವನು, ನಾನಂತು ಆತನಿಗೆ ಕೊಲ್ಲಬೇಕೆನಿಸುವಷ್ಟು ಕೋಪ ಉಂಟಾಗಿತ್ತು. ಆದರೆ ಹೀಗೆಲ್ಲಾ ಯೋಚಿಸಿ ನಾನು ಹಾಗೆ ಮಾಡದೆ ನಿಮ್ಮಲ್ಲಿಗೆ ಬಂದಿದ್ದೇನೆ".
            ಆಗ ಭಗವಾನರು ಆಕೆಗೆ "ಸಾಧು, ಸಾಧು ದೇವತೆ. ಉಕ್ಕುವ ಕ್ರೋಧವ ತಡೆದು ನಿಗ್ರಹಿಸಿರುವೆ. ಹೇಗೆಂದರೆ ಓಡುತ್ತಿರುವ ವೇಗದ ರಥವ ತಡೆವಂತೆ ನಿನ್ನಲ್ಲಿನ ಕೋಪವ ತಡೆದಿರುವೆ" ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು. ತಕ್ಷಣ ಈ ಗಾಥೆ ಕೇಳಿ ಆ ದೇವತೆ ಸೋತಪತ್ತಿ ಫಲದಲ್ಲಿ ಪ್ರತಿಷ್ಠಿತಳಾದಳು. ಅಷ್ಟೇ ಅಲ್ಲ, ಅಲ್ಲಿ ನೆಲೆಸಿದ್ದ ಸಮೂಹವೂ ಸಹಾ ಇದರಿಂದಾಗಿ ಲಾಭ ಪಡೆಯಿತು. ಆದರೆ ಸೋತಪನ್ನ ಸ್ಥಿತಿ ಸಿಕ್ಕಮೇಲೂ ಸಹಾ ಆ ದೇವತೆಯು ಅಳುತ್ತಾ ನಿಂತಳು. ಆಗ ಭಗವಾನರು "ಏಕೆ ದೇವತೆ?" ಎಂದು ಕೇಳಿದಾಗ ಹೀಗೆ ಉತ್ತರಿಸಿದಳು: "ನನ್ನ ಮನೆಯು ನಾಶವಾಗಿದೆ, ನಾನೀಗ ಏನು ಮಾಡಲಿ."

            "ಚಿಂತಿಸಬೇಡ ದೇವತೆ, ನಾನು ನಿನಗೆ ನಿವಾಸ ನೀಡುವೆನು, ನಾನು ನಿನಗೆ ವಿಮಾನ (ದೇವತಾ ವಾಸಸ್ಥಳ) ನೀಡುವೆನು" ಎಂದು ಹೇಳಿ ಭಗವಾನರು ಜೇತವನದಲ್ಲಿದ್ದ ನಿದರ್ಿಷ್ಟ ಮರವನ್ನು ತೋರಿಸಿದರು. "ಅಲ್ಲಿ ಪ್ರವೇಶಿಸು" ಹಾಗೆಯೇ ಆ ದೇವತೆಯು ಅಲ್ಲಿ ಪ್ರವೇಶಿಸಿದಳು. ಈ ಘಟನೆಯ ನಂತರ ಭಗವಾನರು ಭಿಕ್ಷುಗಳಿಗೆ ಮರಗಳನ್ನು ಮತ್ತು ಗಿಡಗಳನ್ನು ಸಹಾ ಹಿಂಸಿಸದಿರುವ ನಿಯಮ ತಂದರು. ಇದರಿಂದ ಪರೋಕ್ಷವಾಗಿ ಅವುಗಳಲ್ಲಿ ನೆಲೆಸುವ ಜೀವಿಗಳಿಗೆ ಹಾನಿಯಾಗುವುದನ್ನು ತಡೆಗಟ್ಟಿದರು. 

No comments:

Post a Comment