Monday 13 July 2015

dhammapada/malavagga/18.8/saamaneratissa

ಅತೃಪ್ತರಿಗೆ ಸಮಾಧಿ ಸುಖವಿಲ್ಲ

"ದಾತರು (ದಾನಿಗಳು) ತಮ್ಮ ಶ್ರದ್ಧಾನುಸಾರ
ಮತ್ತು ಪ್ರಸನ್ನತೆಯನುಸಾರವಾಗಿ ಜನರು
ದಾನ ನಡುವರು. ಯಾರು ಪರರು
ನೀಡುವ ಪಾನ ಹಾಗು ಭೋಜನದಿಂದ
ಅತೃಪ್ತರಾಗುವರೋ, ಪರರಲ್ಲಿ ಅಸೂಯೆ ತಾಳುವರೋ
ಅಂತಹವರು ದಿನದಲ್ಲಿಯಾಗಲಿ ಅಥವಾ
ರಾತ್ರಿಯಲ್ಲಿಯಾಗಲಿ ಸಮಾಧಿಯನ್ನು ಪಡೆಯಲಾರರು."  (249)

"ಯಾರಲ್ಲಿ ಈ ಅತೃಪ್ತಿಯು (ಅಸೂಯೆಯು)
ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕಿ ನಾಶಪಡಿಸಲಾಗಿದೆಯೋ
ಅಂತಹವರು ದಿನದಲ್ಲಿಯಾಗಲಿ ಅಥವಾ ರಾತ್ರಿಯಲ್ಲಾಗಲಿ
ಸಮಾಧಿಯನ್ನು ಪಡೆಯುವರು."   (250)

ಗಾಥ ಪ್ರಸಂಗ 18:8
ಸಾಮಣೇರ ತಿಸ್ಸನ ಅತೃಪ್ತತೆ

            ಶ್ರಾವಸ್ತಿಯಲ್ಲಿ ತಿಸ್ಸನೆಂಬ ಸಾಮಣೇರನಿದ್ದನು. ಆತನು ಆಹಾರಕ್ಕಾಗಿ ಅನಾಥಪಿಂಡಿಕ ಮತ್ತು ವಿಶಾಖೆಯಂತಹ ಮಹಾ ಉಪಾಸಕರಲ್ಲಿ ಹೋಗುತ್ತಿದ್ದನು. ಆತನಷ್ಟೇ ಅಲ್ಲ, ಬೃಹತ್ ಭಿಕ್ಷು ಸಮೂಹವೇ ಅಲ್ಲಿಗೆ ಹೋಗುತ್ತಿತ್ತು. ಆದರೂ ತಿಸ್ಸನು ಆ ಮಹಾದಾನಿಗಳಲ್ಲಿ ದೋಷಗಳನ್ನು ಹುಡುಕುತ್ತಿದ್ದನು. 'ಈ ಆಹಾರವು ತಣ್ಣಗಿದೆ' ಎಂದೂ ಅಥವಾ 'ಈ ಆಹಾರವು ತುಂಬಾ ಬಿಸಿ' ಎಂದೂ, ಆತನಿಗೆ ಏನಾದರೂ ಆಹಾರವು ಅಲ್ಪವಾಗಿ ಸಿಕ್ಕಿದರೆ 'ಅವರೇಕೆ ಅಲ್ಪವಾಗಿ ಆಹಾರ ನೀಡುತ್ತಾರೆ?' ಹಾಗೆಯೇ ಹೆಚ್ಚು ಆಹಾರ ಸಿಕ್ಕಾಗ ಆಗಲೂ ಆತನು 'ಇಷ್ಟು ಆಹಾರ ಅವರು ನೀಡಿದ್ದಾರೆ, ಬಹುಶಃ ಅವರ ಮನೆಯಲ್ಲಿ ಆಹಾರವಿಡಲು ಸ್ಥಳವಿಲ್ಲದಿರಬಹುದು' ಅಥವಾ ಹೀಗೆ ಹೇಳುತ್ತಿದ್ದನು 'ಭಿಕ್ಷುಗಳಿಗೆ ಅಗತ್ಯವಿರುವಷ್ಟು ಆಹಾರ ನೀಡಬೇಕು, ಎಷ್ಟೊಂದು ಸಾರು ಮತ್ತು ಅನ್ನ ನಿಜಕ್ಕೂ ವ್ಯರ್ಥವಾಯಿತು' ಅಥವಾ ಆತನು ತನ್ನ ಸಂಬಂಧಿಕರ ಬಗ್ಗೆ ಹೊಗಳಿಕೊಳ್ಳುತ್ತಿದ್ದನು 'ಓಹ್, ನಮ್ಮ ಬಾಂಧವರ ಮನೆಗೆ ನಾಲ್ಕು ದಿಕ್ಕುಗಳಿಂದ ಭಿಕ್ಷುಗಳು ಬರುವರು. ಛತ್ರದಂತೆ ಎಲ್ಲರಿಗೂ ಆಹಾರ ಸಿಗುವುದು' ಎಂದು ಬಾಂಧವರನ್ನು ಪ್ರಶಂಸಿಸ ತೊಡಗುತ್ತಿದ್ದನು
.
            ಆದರೆ ವಾಸ್ತವದಲ್ಲಿ ತಿಸ್ಸನು ದ್ವಾರಪಾಲಕನ ಮಗನಾಗಿದ್ದನು. ಆತನು ಒಮ್ಮೆ ಬಡಗಿಯವರ ಜೊತೆ ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣ ಬೆಳೆಸಿದಾಗ ಶ್ರಾವಸ್ಥಿಯಲ್ಲಿ ಆತನು ಸಾಮಣೇರನಾದನು. ಆದರೆ ಯಾವಾಗ ಈತನು ಸದಾ ಮಹಾದಾನಿಗಳಿಗೆ ದೋಷಿಕರಿಸಿ ಮತ್ತು ತನ್ನ ಬಾಂಧವರನ್ನು ಪ್ರಶಂಸಿಸಿದನೋ ಆಗ ಭಿಕ್ಷುಗಳಿಗೂ ಆತನ ಬಾಂಧವರನ್ನು ನೋಡಬೇಕೆನಿಸಿತು. "ಈತನ ಬಗ್ಗೆ ಸತ್ಯ ಹುಡುಕಿಬಿಡೋಣ" ಎಂದು ನಿರ್ಧರಿಸಿ ಅವರು ಆತನಿಗೆ ಪ್ರಶ್ನಿಸಿದರು: "ಸೋದರ ನಿನ್ನ ಬಾಂಧವರು ಎಲ್ಲಿ ವಾಸಿಸುವರು?" "ಇಂಥಹ ಹಳ್ಳಿಯಲ್ಲಿ ವಾಸಿಸುವರು" ಎಂದು ಆತನು ಹೇಳಿದರು. ಭಿಕ್ಷುಗಳು ಇತರ ಸಾಮಣೇರರನ್ನು ಆ ಸ್ಥಳಕ್ಕೆ ಕಳುಹಿಸಿ ವಿಚಾರಿಸಿದರು. ಆ ಸಾಮಣೇರರು ಆ ಹಳ್ಳಿಗೆ ಹೋದಾಗ "ನಮ್ಮಲ್ಲಿ ಇದೇ ಹಳ್ಳಿಯಿಂದ ತಿಸ್ಸನೆಂಬ ಸಾಮಣೇರನಿದ್ದಾನೆ, ಆತನ ಸಂಬಂಧಿಕರ್ಯಾರು?" "ನಮ್ಮಲ್ಲಿ ಶ್ರೀಮಂತರ ಮನೆಯಿಂದ ತಿಸ್ಸನೆಂಬ ಯಾವ ಯುವಕನೂ ಭಿಕ್ಷುವಾಗಿಲ್ಲ. ಈ ಸಮಣೇರರು ಏನೆಂದು ಪ್ರಶ್ನಿಸುತ್ತಾರೆ? ಬಹುಶಃ ನೀವು ಹೇಳುವ ತಿಸ್ಸ, ನಮ್ಮ ದ್ವಾರಪಾಲಕನ ಮಗ, ಆತನೊಮ್ಮೆ ಬಡಗಿಗಳ ಸಂಗಡ ಪ್ರಯಾಣ ಮಾಡಿ ಅಲ್ಲಿಯೇ ಸಾಮಣೇರನಾಗಿದ್ದಾನೆ ಎಂದು ಕೇಳಿದ್ದೇವೆ. ಬಹುಶಃ ನೀವು ಕೇಳುವ ತಿಸ್ಸ, ಆತನೇ ಆಗಿರಬಹುದು" ಎಂದರು.

            ಆಗ ಭಿಕ್ಷುಗಳಿಗೆ ತಿಸ್ಸನಿಗೆ ಸಂಬಂಧಿಕರೇ ಇಲ್ಲ ಎಂದು ತಿಳಿದುಹೋಯಿತು. ಅವರು ಹಿರಿಯ ಭಿಕ್ಷುಗಳಿಗೆ "ಈ ತಿಸ್ಸ ಆಧಾರವಿಲ್ಲದೆ ಮಾತನಾಡುತ್ತಾನೆ, ಕೇವಲ ಬುರುಡೆ ಬಿಡುತ್ತಿದ್ದಾನೆ ಅಷ್ಟೇ". ಈ ವಿಷಯವು ಬುದ್ಧರ ಬಳಿಗೂ ಹೋಯಿತು. ಆಗ ಭಗವಾನರು ಹೀಗೆ ನುಡಿದರು: "ಭಿಕ್ಷುಗಳೇ, ತಿಸ್ಸ ಈ ರೀತಿಯ ಪರನಿಂದೆ ಮತ್ತು ಸ್ವಪ್ರಶಂಸೆ ಮಾಡುತ್ತಿರುವುದು ಇದೇ ಮೊದಲಲ್ಲ. ಆತನು ಹಿಂದಿನ ಜನ್ಮದಲ್ಲೂ ಹೀಗೆಯೇ ಬಡಾಯಿಕೋರನಾಗಿದ್ದನು" ಎಂದು ನುಡಿದರು. ನಂತರ ಹೀಗೆ ಮುಂದುವರೆಸಿದರು, "ಭಿಕ್ಷುಗಳೇ, ಪರರು ನೀಡುವ ಆಹಾರದಲ್ಲಿ ಅಲ್ಪವೆಂದಾಗಲಿ, ಅಧಿಕವೆಂದಾಗಲಿ, ಸ್ವಾದಿಷ್ಟವೆಂದಾಗಲಿ ಅಥವಾ ಒರಟು ಆಹಾರವೆಂದಾಗಲಿ ಅತೃಪ್ತಿಪಟ್ಟರೆ ಅಂತಹವನು ದಿನದಲ್ಲಿಯಾಗಲಿ ಅಥವಾ ರಾತ್ರಿಯಲ್ಲಾಗಲಿ ಸಮಾಧಿ ಪಡೆಯಲಾರನು ಅಥವಾ ಲೋಕೋತ್ತರ ಫಲವನ್ನು ಪಡೆಯಲಾರರು" ಎಂದು ನುಡಿದು ಭಗವಾನರು ಈ ಮೇಲಿನ ಗಾಥೆಗಳನ್ನು ನುಡಿದರು.

No comments:

Post a Comment