Friday 3 July 2015

dhammapada/kodhavagga/17.5/theparentsofbuddha

ಅಹಿಂಸೆವುಳ್ಳವರೇ ಅಮರತ್ವ ಗಳಿಸುವವರು

"ಅಹಿಂಸೆಯನ್ನೇ ಯಾವ ಮುನಿಗಳು ಪಾಲಿಸುತ್ತ,
ನಿತ್ಯವೂ ಕಾಯದಿಂದ ಸಂಯಮಯುತರೋ,
ಅಂತಹವರು ಅಮರತ್ವದ ಸ್ಥಾನವನ್ನು ತಲುಪುವರು,
ಅಲ್ಲಿ ಅವರು ಶೋಕಿಸಬೇಕಿಲ್ಲ."     (225)

ಗಾಥ ಪ್ರಸಂಗ 17:5
ಬುದ್ಧರ ಹಿಂದಿನ ಜನ್ಮದ ತಂದೆ-ತಾಯಿಗಳು


            ಒಮ್ಮೆ ಭಗವಾನರು ಭಿಕ್ಷು ಸಂಘದ ಸಮೇತ ಸಾಕೇತಕ್ಕೆ ಆಹಾರಕ್ಕಾಗಿ ಹೊರಟರು. ಆಗ ವೃದ್ಧ ಬ್ರಾಹ್ಮಣನೊಬ್ಬನು ಬುದ್ಧ ಭಗವಾನರನ್ನು ಕಂಡಕೂಡಲೇ ಆನಂದದಿಂದ ಸಂಭ್ರಮಿಸಿದರು. ಹೇಗೆ ಕಮಲವನ್ನು ಮರಳಿ ನೀರಿಗೆ ಬಿಟ್ಟಾಗ ಪುನಃ ಅರಳುವುದೋ ಹಾಗೇ ಆತನು ಅರಳಿದನು. ಅಷ್ಟೇ ಅಲ್ಲ, ಆತನು ಭಗವಾನರನ್ನು ಕುರಿತು ಹೀಗೆಂದನು: "ಓಹ್ ಮಗು, ನಮ್ಮನ್ನು ನೋಡಲು ನೀನು ದೀರ್ಘಕಾಲದಿಂದ ಬಂದಿಲ್ಲವೇಕೆ? ನನ್ನ ಜೊತೆಗೆ ಬಾ, ನಿನ್ನ ತಾಯಿಯು ನನ್ನನ್ನು ನೋಡುವಂತಾಗಲಿ" ಎಂದನು.
            ಹೀಗೆ ಹೇಳುತ್ತಾ ಆತನು ಭಗವಾನರಿಗೆ ತಮ್ಮ ಮನೆಗೆ ಆಹ್ವಾನಿಸಿದನು. ಅಲ್ಲಿ ಇನ್ನೊಂದು ಆಶ್ಚರ್ಯ ಕಾದಿತ್ತು. ಅಲ್ಲಿ ಆತನ ಪತ್ನಿಯು ಸಹಾ ಭಗವಾನರನ್ನು ಕಂಡು "ಓಹ್! ಮಗು, ನಮ್ಮನ್ನು ನೋಡಲು ನೀನು ದೀರ್ಘಕಾಲದಿಂದ ಏಕೆ ಬರಲಿಲ್ಲ." ಎಂದಳು. ನಂತರ ಆಕೆ ತನ್ನ ಮಕ್ಕಳನ್ನು ಕರೆದು "ನೋಡಿ, ನಿಮ್ಮ ಹಿರಿಯಣ್ಣ" ಎಂದು ಪರಿಚಯ ಮಾಡಿಸಿ, ಅವರಿಂದ ವಂದಿಸುವಂತೆ ಮಾಡಿದಳು. ನಂತರ ಆ ದಿನದಿಂದ ಭಗವಾನರಿಗೆ ಹಲವು ದಿನಗಳವರೆಗೆ ಪ್ರತಿದಿನ ಆಹಾರ ನೀಡಿದರು. ಭಗವಾನರು ಸಹ ಅವರಿಗೆ ನಿತ್ಯವೂ ಧಮ್ಮಬೋಧನೆ ನೀಡುತ್ತಿದ್ದರು. ಸ್ವಲ್ಪಕಾಲದಲ್ಲೇ ಆ ವೃದ್ಧ ದಂಪತಿ ಅನಾಗಾಮಿ ಸ್ಥಿತಿ ಪ್ರಾಪ್ತಿಮಾಡಿದರು.
            ಈ ವಿಷಯದ ಬಗ್ಗೆ ಭಿಕ್ಷುಗಳಿಗೆ ಗೊಂದಲ ಉಂಟಾಯಿತು, "ಏತಕ್ಕಾಗಿ ಆ ಬ್ರಾಹ್ಮಣ ದಂಪತಿಗಳು ಭಗವಾನರಿಗೆ 'ಮಗು' ಎಂದು ಕರೆಯುತ್ತಿದ್ದಾರೆ?" ಎಂದು.
            ಕೊನೆಗೆ ಆ ಭಿಕ್ಷುಗಳು ಭಗವಾನರಲ್ಲಿ ಈ ಪ್ರಶ್ನೆ ಕೇಳಿಯೇಬಿಟ್ಟರು. ಆಗ ಭಗವಾನರು ಹೀಗೆ ಉತ್ತರಿಸಿದರು: "ಭಿಕ್ಷುಗಳೇ, ನಾನು ಅವರ ಮಗನಾಗಿದ್ದರಿಂದಲೇ ಹಾಗೆ ಕರೆದಿದ್ದಾರೆ. ಭಿಕ್ಷುಗಳೇ, ಒಂದಲ್ಲ, ಎರಡಲ್ಲ, ಸಾವಿರದ ಐನೂರಕ್ಕೂ ಹೆಚ್ಚಿನ ಜನ್ಮಗಳಲ್ಲಿ ಅವರ ಮಗನಾಗಿಯು ಅಥವಾ ಸೋದರ ಮಗನಾಗಿಯು ಅಥವಾ ಸಹೋದರಿಯ ಮಗನಾಗಿಯು ಹುಟ್ಟಿದ್ದೆನು. ಆದ್ದರಿಂದಲೇ ಅವರಿಗೆ ಹಿಂದಿನ ಜನ್ಮ ನೆನಪಿಗೆ ಬಂದಿದೆ ಮತ್ತು ನನ್ನನ್ನು ಮಗುವೆಂದು ಕರೆದಿದ್ದಾರೆ."
            ನಂತರ ಭಗವಾನರು ಅಲ್ಲಿ ಮೂರು ತಿಂಗಳು ವಾಸವಾಗಿದ್ದರು. ನಂತರ ಆ ವೃದ್ಧದಂಪತಿ ಅರಹತ್ವವನ್ನು ಪ್ರಾಪ್ತಿಮಾಡಿದರು, ನಂತರ ಪರಿನಿಬ್ಬಾಣವನ್ನು ಪ್ರಾಪ್ತಿಮಾಡಿದರು. ಇದರ ಬಗ್ಗೆ ಅರಿಯದ ಭಿಕ್ಷುಗಳು ಭಗವಾನರಿಗೆ ಅವರು ಮರುಹುಟ್ಟು ಎಲ್ಲಿ ಪಡೆದಿರುವರು ಎಂದು ಪ್ರಶ್ನಿಸಿದರು. ಆಗ ಭಗವಾನರು ಅವರಿಗೆ ಜನ್ಮವಿಲ್ಲ. ಏಕೆಂದರೆ ಅರಹತ್ವ ಪ್ರಾಪ್ತಿ ಮಾಡಿರುವರೆಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.


No comments:

Post a Comment