Monday 13 July 2015

dhammapada/malavagga/18.4/laludayi

ಅಲಕ್ಷವೇ ಮಲ

"ಪುನಃ ಪುನಃ ನೆನಪಿಸಿಕೊಳ್ಳದಿರುವಿಕೆ ಮಂತ್ರಕ್ಕೆ (ವಿದ್ಯೆಯ ಸ್ಮರಣೆಗೆ) ಮಲ,
ನಿರ್ಲಕ್ಷಿಸುವಿಕೆ ಗೃಹಕ್ಕೆ ಮಲ,
ಸೋಮಾರಿತನವೇ ಸೌಂದರ್ಯಕ್ಕೆ ಮಲ,
ಅಜಾಗರೂಕತೆಯೇ ರಕ್ಷಣೆಗೆ ಮಲ."             (241)

ಗಾಥ ಪ್ರಸಂಗ 18:4
ಲಾಲುದಾಯಿಯ ಒಣಪ್ರತಿಷ್ಠೆ

            ಶ್ರಾವಸ್ಥಿಯ ನಿವಾಸಿಗಳು ಪರಿಕರಗಳೊಂದಿಗೆ ವಿಹಾರಕ್ಕೆ ಹೊರಡುತ್ತಿದ್ದರು. ಹಾಗು ಧಮ್ಮವನ್ನು ಆಲಿಸುತ್ತಿದ್ದರು. ಹಿಂತಿರುಗಿದ ಬಳಿಕ ಅವರು ಸಾರಿಪುತ್ರರ ಮತ್ತು ಮೊಗ್ಗಲ್ಲಾನರ ಧಮ್ಮ ಬೋಧನೆಯನ್ನು ಪ್ರಶಂಸಿಸುತ್ತಿದ್ದರು. ಒಮ್ಮೆ ಅವರು ಹೀಗೆ ಪ್ರಶಂಸಿಸುತ್ತಿರುವಾಗ ಲಾಲುದಾಯಿಯು ಅವರ ಪ್ರಶಂಸೆಯನ್ನು ಕೇಳಿದನು. ನಂತರ ಅವನು ಜನರಿಗೆ ಹೀಗೆ ಹೇಳಿದನು: "ನೀವು ಸಾರಿಪುತ್ರರಿಗೆ ಮತ್ತು ಮೊಗ್ಗಲ್ಲಾನರಿಗೆ ಹೀಗೆ ಪ್ರಶಂಸಿಸುತ್ತಿದ್ದೀರಿ. ಆದರೆ ನೀವು ನನ್ನ ಉಪದೇಶಗಳನ್ನು ಕೇಳಿದರೆ ನೀವು ಇನ್ನೆಷ್ಟು ಆಶ್ಚರ್ಯಪಡುವಿರೋ, ಅದೆಷ್ಟು ಪ್ರಶಂಸಿಸುವಿರೋ ತಿಳಿಯದು" ಎಂದುಬಿಟ್ಟನು. ಅದನ್ನು ಆಲಿಸಿದ ಜನರು "ಖಂಡಿತವಾಗಿಯೂ ಇವನು ಸಹಾ ದೊಡ್ಡ ಪಂಡಿತನೇ ಆಗಿರಬಹುದು, ಮುಂದಿನಸಾರಿ ತಪ್ಪದೆ ಇವನ ಬೋಧನೆ ಆಲಿಸಬೇಕು" ಎಂದು ಜನರು ನಿರ್ಧರಿಸಿದರು.
            ಅದರಂತೆಯೇ ಜನರು ಮುಂದಿನ ದಿನದಂದು ಲಾಲುದಾಯಿಯನ್ನೇ ಬೋಧಿಸಿ ಎಂದು ಕೋರಿಕೊಂಡರು. ಆಗ ಲಾಲುದಾಯಿಯು ಕುಳಿತನು. ಬಣ್ಣದ ಬೀಸಣಿಕೆ ಕೈಯಲ್ಲಿ ಹಿಡಿದುಕೊಂಡು ಅಲ್ಲಾಡಿಸುತ್ತಾ "ನಾನು ನಂತರ ಬೋಧಿಸುವೆನು, ಈಗ ಬೇರೆಯವರೇ ಸೂಕ್ತ" ಎಂದು ಇಳಿದುಬಿಟ್ಟನು. ಮತ್ತೊಂದುಸಾರಿ ಹೀಗೆಯೇ ಆಹ್ವಾನಿಸಿದಾಗ "ನಾನು ಬೆಳಿಗ್ಗೆ ಬೋಧಿಸುವೆನು, ಈಗ ರಾತ್ರಿ ಬೇರೆಯವರು ಬೋಧಿಸುವುದೇ ಉಚಿತವಾದುದು" ಎಂದುಬಿಟ್ಟನು. ಪುನಃ ಬೆಳಿಗ್ಗೆ ಧಮ್ಮ ಬೋಧಿಸುವಂತೆ ಯಾಚಿಸಿದಾಗ ಹಿಂದಿನಂತೆ ಜಾರಿಕೊಳ್ಳಲು ಯತ್ನಿಸಿದನು. ಆಗ ಜನರಿಗೆ ರೇಗಿಹೋಯಿತು, ಅವರು ಹೀಗೆ ನಿಂದಿಸಿಯೇಬಿಟ್ಟರು. "ಮೂರ್ಖ, ನಾವು ಸಾರಿಪುತ್ರರ ಮತ್ತು ಮೊಗ್ಗಲ್ಲಾನರ ಪ್ರಶಂಸೆ ಮಾಡಿದಾಗ, ಅದು ಇದು ಎಂದು ಹೇಳಿ, ನಾನೇ ಶ್ರೇಷ್ಠನೆಂದು ಜಂಬ ಕೊಚ್ಚಿಕೊಂಡೆಯಲ್ಲ, ಈಗೇಕೆ ಏನನ್ನೂ ಹೇಳುತ್ತಿಲ್ಲ?" ಎಂದು ಹೇಳಿ ಅವನನ್ನು ಹೊಡೆಯಲು ಹೆಂಟೆ, ಕೋಲುಗಳಿಂದ ಅಟ್ಟಿಸಿಕೊಂಡು ಬಂದರು. ಆಗ ಲಾಲುದಾಯಿಯು ಓಡುತ್ತಾ ಕೊಳಚೆ ಗುಂಡಿಯಲ್ಲಿ ಬಿದ್ದುಬಿಟ್ಟನು.

            ಈ ವಿಷಯವು ಎಲ್ಲೆಡೆ ಹರಡಿ ಬುದ್ಧರ ಬಳಿಗೂ ಬಂದುಬಿಟ್ಟಿತು. ಆಗ ಭಗವಾನರು ಹೀಗೆ ಭಿಕ್ಷುಗಳಿಗೆ ಹೇಳಿದರು: "ಭಿಕ್ಷುಗಳೇ, ಲಾಲುದಾಯಿ ಈ ರೀತಿ ಕೊಳಚೆ ಗುಂಡಿಯಲ್ಲಿ ಬಿದ್ದಿರುವುದು ಇದೇ ಮೊದಲಲ್ಲ, ಆತನು ತನ್ನ ಹಿಂದಿನ ಜನ್ಮದಲ್ಲಿಯೂ ಹೀಗೆಯೇ ಮಾಡಿ ಆಗಲು ಕೊಳಚೆ ಗುಂಡಿಯಲ್ಲಿ ಬಿದ್ದಿದ್ದನು" ಎಂದು ಭಗವಾನರು ಆ ಜಾತಕ ಕಥೆಯನ್ನು ವಿವರಿಸಿದರು. ಆಗ ಸಾರಿಪುತ್ರರು ಸಿಂಹವಾಗಿದ್ದರು ಮತ್ತು ಲಾಲುದಾಯಿಯು ಹಂದಿಯಾಗಿದ್ದನು" ಎಂದು ಹೇಳಿದರು. ನಂತರ ಹೀಗೆ ನುಡಿದರು: "ಭಿಕ್ಷುಗಳೇ, ಲಾಲುದಾಯಿಯು ಅತಿ ಸ್ವಲ್ಪ ಧಮ್ಮ ತಿಳಿದಿದ್ದಾನೆ ಹಾಗು ಆತನು ಎಂದಿಗೂ ಅವುಗಳ ಪುನರಾವರ್ತನೆ ಮಾಡಲಿಲ್ಲ, ಒಬ್ಬನು ಅಲ್ಪವೇ ತಿಳಿದಿರಲಿ ಅಥವಾ ಮಹತ್ತರವೇ ತಿಳಿದಿರಲಿ, ಅವುಗಳನ್ನು ಪುನಃ ಪುನಃ ನೆನಪು ಮಾಡಿಕೊಳ್ಳದಿದ್ದರೆ ಅವು ಸ್ಮರಣೆಗೆ ಬರದು, ಅದೆಷ್ಟೇ ಅಲ್ಪವಾಗಿರಲಿ ಅದನ್ನು ನೆನಪಿಸಿಕೊಳ್ಳದಿದ್ದರೆ ಕಬ್ಬಿಣಕ್ಕೆ ತುಕ್ಕು ಹಿಡಿದಂತೆ ವ್ಯರ್ಥವಾಗುವುದು ಎಂದು ನುಡಿದು ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment