Monday 13 July 2015

dhammapada/malavagga/18.7/whichsilaisdifficult

ಶೀಲವಿಲ್ಲದವನು ತನ್ನ ಬೇರುಗಳನ್ನೇ ಕತ್ತರಿಸಿಕೊಳ್ಳುತ್ತಾನೆ

"ಯಾವ ವ್ಯಕ್ತಿ ಪ್ರಾಣಗಳನ್ನು ತೆಗೆಯುತ್ತಾನೋ,
ಸುಳ್ಳನ್ನು ಹೇಳುತ್ತಾನೋ,
ಕೊಡದದ್ದನ್ನು ತೆಗೆದುಕೊಳ್ಳುತ್ತಾನೋ ಮತ್ತು
ಪರನಾರಿ ಗಮನ ಮಾಡುತ್ತಾನೋ"              (246)

"ಹಾಗು ಯಾವ ನರನು ಸುರೆ, ಮೆರೆಯದಂತಹ
ಮಾದಕ ಪೇಯಗಳನ್ನು ತೆಗೆದುಕೊಳ್ಳುತ್ತಾನೋ
ಅಂತಹವ ಈ ಲೋಕದಿಂದಲೇ ತನ್ನ
ಬೇರುಗಳನ್ನು ಕಿತ್ತುಹಾಕಿಕೊಂಡುಬಿಡುತ್ತಾನೆ
(ದುರ್ಗತಿಗೆ ಹೋಗಲು ಸಿದ್ಧನಾಗಿಬಿಡುತ್ತಾನೆ)."              (247)

"ಓ ಉತ್ತಮ ಪುರುಷನೇ, ಅರಿಯುವಂತಾಗು ಪಾಪಧಮ್ಮವನ್ನು
ನಿಯಂತ್ರಿಸುವುದು ಸುಲಭವಲ್ಲ,
ನಿನ್ನನ್ನು ಲೋಭ ಮತ್ತು ಅಧಮ್ಮವು
ಚಿರದುಃಖದೆಡೆಗೆ ಎಳೆದುಹಾಕದಿರಲಿ."          (248)

ಗಾಥ ಪ್ರಸಂಗ 18:7
ಯಾವ ಶೀಲವು ಪಾಲಿಸಲು ಕಷ್ಟಕರ ?

            ಬುದ್ಧ ಭಗವಾನರು ಜೇತವನದ ವಿಹಾರದಲ್ಲಿ ವಾಸಿಸುತ್ತಿದ್ದಾಗ ನಡೆದ ಪ್ರಸಂಗವಿದು. ಅಲ್ಲಿಯ 500 ಭಿಕ್ಷುಗಳು ಪಂಚಶೀಲಗಳನ್ನು ತೆಗೆದುಕೊಂಡು ಹಾಗು ಧ್ಯಾನ ವಿಷಯಗಳನ್ನು ತೆಗೆದುಕೊಂಡು ಸಾಧನೆ ಮಾಡುತ್ತಿದ್ದರು. ಆಗ ಅವರಿಗೆ ಕೆಲವೊಂದು ಶೀಲಗಳನ್ನು ಪಾಲಿಸಲು ಕಷ್ಟವಾಗುತ್ತಿತ್ತು. ಕೆಲವರಿಗೆ ಅಹಿಂಸೆಯು ಸುಲಭವಾದರೆ ಕೆಲವರಿಗೆ ಅದೇ ಕಷ್ಟವಾಗಿ ಕಂಡುಬರುತ್ತಿತ್ತು. ಕೆಲವರಿಗೆ ಪ್ರಾಮಾಣಿಕತೆ ಸುಲಭವಾದರೆ ಕೆಲವರಿಗೆ ಅದೇ ಕಷ್ಟವಾಗಿ ಕಂಡುಬರುತ್ತಿತ್ತು. ಕೆಲವರಿಗೆ ಬ್ರಹ್ಮಚರ್ಯ ಕಷ್ಟವಾದರೆ ಮತ್ತೆ ಕೆಲವರಿಗೆ ಅದೇ ಕಡುಕಷ್ಟವಾಗಿತ್ತು. ಕೆಲವರಿಗೆ ಸತ್ಯಪಾಲನೆ ಸುಲಭವಾದರೆ ಅನ್ಯರಿಗೆ ಅದೇ ಕಷ್ಟವೆನಿಸಿತ್ತು. ಹೀಗೆ ಸರ್ವರೂ ಸರ್ವ ಶೀಲಗಳನ್ನು ಸುಲಭವಾಗಿ ಪಾಲನೆ ಮಾಡಲಾಗುತ್ತಿರಲಿಲ್ಲ. ಆದರೂ ಅವರು ಕಷ್ಟಪಟ್ಟು ಶೀಲಗಳಲ್ಲಿ ದೃಢವಾದರು. ಒಮ್ಮೆ ಧಮ್ಮ ಚಚರ್ೆಯಲ್ಲಿ ಈ ವಿಷಯವೇ ಮಾತನಾಡಲಾರಂಭಿಸಿದರು. "ಇದು ಅತ್ಯಂತ ಕಷ್ಟಕರ, ಪಾಲಿಸಲು ಕಷ್ಟಕರ ಎಂಬುದು ಯಾವುದಾದರೂ ಇದ್ದರೆ ಅದು ಈ ಶೀಲವೇ ಆಗಿದೆ" ಎಂದು. ಪ್ರತಿಯೊಬ್ಬರೂ ಒಂದೊಂದು ಶೀಲಗಳ ಬಗ್ಗೆ ಹೇಳಲಾರಂಭಿಸಿದರು. ಕೊನೆಗೆ ಬುದ್ಧರೇ ಈ ವಿಷಯದ ಬಗ್ಗೆ ಸರಿಯಾಗಿ ತಿಳಿಸುತ್ತಾರೆಂದು ತಿಳಿದು ಅವರ ಬಳಿಗೆ ಬಂದು ವಿಷಯ ತಿಳಿಸಿದರು.

            ಆಗ ಭಗವಾನರು ಯಾವೊಂದು ಶೀಲವನ್ನು ಕಡೆಗಣಿಸದೆ ಈರೀತಿ ಉತ್ತರಿಸಿದರು: "ಪ್ರತಿಯೊಂದು ಶೀಲವೂ ಪಾಲಿಸಲು ಕಷ್ಟವೇ ಆಗಿದೆ" (ಯಾವ ಯಾವ ಶೀಲವು ನಮಗೆ ಸುಲಭವೋ ಅದನ್ನು ನಾವು ಹಿಂದಿನ ಜನ್ಮದಿಂದಲೂ ಪಾಲಿಸುತ್ತ ಬಂದಿರುವುದರಿಂದಾಗಿ ಅದು ಸುಲಭವಾಗಿ ಕಾಣಿಸುತ್ತದೆ ಅಷ್ಟೆ). ನಂತರ ಭಗವಾನರು ಈ ಗಾಥೆಗಳನ್ನು ಹೇಳಿದರು

No comments:

Post a Comment