Monday 5 October 2015

dhammapada/brahmanavagga/26.22/tolerentbhikkhu

ಹಿಂಸಿಸದವನೇ ಬ್ರಾಹ್ಮಣ
ಯಾರು ಭಯಪಡುವಂತಹ ಅಥವಾ ಧೈರ್ಯವುಳ್ಳಂತಹ
ಯಾವ ಜೀವಿಗಳಿಗೂ ಹಿಂಸಿಸದೆ ದಂಡಶಸ್ತ್ರಗಳ ತ್ಯಾಗ ಮಾಡಿರುವನೋ,
ಯಾರು ಜೀವಿಗಳಿಗೆ ಹತ್ಯೆ ಮಾಡುವುದಿಲ್ಲವೋ ಅಥವಾ
ಹಿಂಸೆ ಮಾಡುವುದಿಲ್ಲವೋ ಅಂತಹವನನ್ನು ನಾನು ಬ್ರಾಹ್ಮಣ ಎನ್ನುತ್ತೇನೆ.         (405)

ಗಾಥ ಪ್ರಸಂಗ 26.22
ವ್ಯರ್ಥವಾಗಿ ಪೆಟ್ಟು ತಿಂದ ಭಿಕ್ಷು

                ಒಬ್ಬ ಭಿಕ್ಷುವು ಭಗವಾನರಿಂದ ಧ್ಯಾನದ ವಿಷಯ ಸ್ವೀಕರಿಸಿ, ವನಕ್ಕೆ ಹೋಗಿ ಅಲ್ಲಿ ದೃಢವಾಗಿ ಧ್ಯಾನ ಮಾಡಿದನು, ನಂತರ ಅರಹಂತನು ಆದನು. ನಂತರ ಆತನು ಹೀಗೆ ತನ್ನಲ್ಲೇ ಹೇಳಿಕೊಂಡನು: ನಾನು ಪಡೆದ ಈ ಮಹಾ ಸೌಭಾಗ್ಯವನ್ನು ಭಗವಾನರಿಗೂ ತಿಳಿಸುತ್ತೇನೆ. ನಂತರ ಅವನು ಅಡವಿಯಿಂದ ಜೇತವನದೆಡೆಗೆ ಪ್ರಯಾಣ ಆರಂಭಿಸಿದನು.
                ಅದೇವೇಳೆಯಲ್ಲಿ ಸ್ತ್ರೀಯೊಬ್ಬಳು ತನ್ನ ಗಂಡನೊಂದಿಗೆ ಜಗಳವಾಡಿದಳು. ಆತನಿಲ್ಲದ ವೇಳೆ ಆಕೆಯು ಕ್ರುದ್ಧಳಾಗಿ ತನ್ನ ತವರು ಮನೆಯ ಹಾದಿ ಹಿಡಿದಳು. ದಾರಿಯಲ್ಲಿ ಆಕೆ ಹೋಗುವಾಗ ಮುಂದೆ ಈ ಭಿಕ್ಷುವು ಹೋಗುತ್ತಿರುವುದನ್ನು ಗಮನಿಸಿ ಆಕೆಯು ತನ್ನ ಸುರಕ್ಷತೆಗಾಗಿ ಅತಿ ಕಡಿಮೆ ಅಂತರದಲ್ಲಿ ಆ ಭಿಕ್ಷುವನ್ನು ಹಿಂಬಾಲಿಸಿದಳು. ಆದರೆ ಈ ವಿಷಯ ಆ ಭಿಕ್ಷುವಿಗೆ ತಿಳಿದಿರಲಿಲ್ಲ.
                ಇತ್ತ ಆಕೆಯ ಗಂಡನು ಮನೆಯಲ್ಲಿ ಆಕೆಯು ಕಾಣದೆ ಇದ್ದಾಗ, ಆಕೆಯು ತವರುಮನೆಗೆ ಹೋಗಿರಬಹುದೆಂದು ಆಕೆಯನ್ನು ಹುಡುಕುತ್ತ ಬರುವಾಗ, ಆಕೆಯು ಭಿಕ್ಷುವನ್ನು ಹಿಂಬಾಲಿಸುತ್ತ ನಡೆಯುತ್ತಿರುವುದನ್ನು ಕಂಡನು. ಓ ಈ ಭಿಕ್ಷು ನನ್ನ ಹೆಂಡತಿಯನ್ನು ಹಾರಿಸಿಕೊಂಡು ಹೋಗುತ್ತಿದ್ದಾನೆ ಎಂದುಕೊಂಡು ಆ ಭಿಕ್ಷುವಿನ ಬಳಿಗೆ ಬಂದನು. ಹಾಗು ಭಿಕ್ಷುವನ್ನು ನಿಂದಿಸಲು ಆರಂಭಿಸಿದನು. ಆಗ ಆತನನ್ನು ತಡೆದ ಆ ಸ್ತೀಯು ಹೀಗೆ ಹೇಳಿದಳು: ದಯವಿಟ್ಟು ಅವರಿಗೆ ಏನೂ ಮಾಡಬೇಡಿ, ಏನೂ ಹೇಳಬೇಡಿ, ಅವರು ನನ್ನತ್ತ ತಿರುಗಿಯೂ ನೋಡಿಲಿಲ್ಲ, ನನ್ನ ಜೊತೆ ಮಾತನಾಡಲೂ ಇಲ್ಲ.
                ಆದರೂ ಸಹಾ ಕ್ರುದ್ಧನಾಗಿದ್ದ ಆಕೆಯ ಗಂಡ ಆ ಭಿಕ್ಷುವಿಗೆ ಹಿಗ್ಗಾಮುಗ್ಗ ಥಳಿಸಿದನು. ನಂತರ ತನ್ನ ಪತ್ನಿಯನ್ನು ಕರೆದುಕೊಂಡು ಹಿಂತಿರುಗಿದನು.
                ಆ ಪೂಜ್ಯ ಭಿಕ್ಷುವಿನ ಶರೀರವೆಲ್ಲಾ ಜರ್ಜರಿತವಾಗಿತ್ತು. ಹೊಡೆತಗಳಿಂದ ಇಡೀ ಭಾಗಗಳು ನೋವಿನಿಂದ ಕೂಡಿತ್ತು. ಆದರೂ ಸುಧಾರಿಸಿಕೊಂಡು ಆತನು ವಿಹಾರಕ್ಕೆ ಹಿಂತಿರುಗಿ ಇಡೀ ಸಂಗತಿಯನ್ನು ಭಿಕ್ಷುಗಳಿಗೆ ತಿಳಿಸಿದನು. ಆಗ ಅವರು ಹೀಗೆ ಪ್ರಶ್ನಿಸಿದರು: ಸೋದರ, ಆಕೆಯ ಗಂಡ ನಿನಗೆ ಹೊಡೆಯುವಾಗ, ನೀನು ಆತನ ಮೇಲೆ ಕೋಪಗೊಂಡಿದ್ದಿರಾ? ಇಲ್ಲ, ನಾನು ಕೋಪಗೊಂಡಿರಲಿಲ್ಲ.

                ಈತನು ಸುಳ್ಳು ಹೇಳುತ್ತಿದ್ದಾನೆ ಎಂದು ಆ ಭಿಕ್ಷುಗಳು ಭಗವಾನರಿಗೆ ಈತನ ಬಗ್ಗೆ ತಿಳಿಸಿದಾಗ ಭಗವಾನರು ಆತನು ಅರಹಂತನಾಗಿರುವನೆಂದು ತಿಳಿಸಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment