Thursday 1 October 2015

dhammapada/brahmanavagga/26.1/allmonksarenotarahanths

26. ಬ್ರಾಹ್ಮಣ ವಗ್ಗ
ಅರಚಿತವನ್ನು ಸಾಕ್ಷತ್ಕರಿಸು
"ಕತ್ತರಿಸು ತೃಷ್ಣೆಯ ಪ್ರವಾಹವನ್ನು
ಪರಾಕ್ರಮದಿಂದ, ಕಾಮದಿಂದ ಪಾರಾಗು
ಓ ಬ್ರಾಹ್ಮಣ, ಸಂಖಾರಗಳ ಕ್ಷಯವನ್ನು ಅರಿತು
ಅರಚಿತವನ್ನು (ನಿಬ್ಬಾಣ) ತಿಳಿಯುವಂತಾಗು."               (383)

ಗಾಥ ಪ್ರಸಂಗ 26.1

ಎಲ್ಲಾ ಭಿಕ್ಷುಗಳು ಅರಹಂತರಲ್ಲ


                ಒಮ್ಮೆ ಒಬ್ಬ ಬ್ರಾಹ್ಮಣನು ಭಗವಾನರಿಂದ ಧಮ್ಮವನ್ನು ಆಲಿಸಿ, ಅತ್ಯಂತ ಹಷರ್ಿತನಾಗಿ, ಅಂದಿನಿಂದ ಹದಿನಾರು ಭಿಕ್ಷುಗಳಿಗೆ ನಿತ್ಯ ಆಹಾರ ದಾನವನ್ನು ನೀಡತೊಡಗಿದನು. ಭಿಕ್ಷುಗಳು ಬಂದಾಗ ಆತನು ಅತ್ಯಂತ ಗೌರವ ನೀಡಿ, ಅವರ ಪಿಂಡಪಾತ್ರೆಗಳನ್ನು ಸ್ವೀಕರಿಸುತ್ತಿದ್ದನು. ಹಾಗು ಹೀಗೆ ನುಡಿಯುತ್ತಿದ್ದನು: "ಪೂಜ್ಯ ಅರಹಂತರು ಹತ್ತಿರ ಬನ್ನಿ, ಪೂಜ್ಯ ಅರಹಂತರು ಕುಳಿತುಕೊಳ್ಳಲಿ." ಹೀಗೆ ಅತನು ಎಲ್ಲಾ ಭಿಕ್ಷುಗಳಿಗೂ ಅರಹಂತರೆಂದೇ ಸಂಬೋಧಿಸುತ್ತಿದ್ದನು. ಆದರೆ ಇದರಿಂದ ಅರಹಂತರಲ್ಲದ ಭಿಕ್ಷುಗಳಿಗೆ ಅಪಾರ ಇರುಸು-ಮುರುಸು ಉಂಟಾಗುತ್ತಿತ್ತು. ಹೀಗಾಗಿ ಪೇಚಾಟಕ್ಕೆ ಸಿಲುಕಬಾರದೆಂದು ಬಹುಪಾಲು ಭಿಕ್ಷುಗಳು ಆತನ ಮನೆಗೆ ಹೋಗುವುದನ್ನು ನಿಲ್ಲಿಸಿದರು.
                ಇದರಿಂದಾಗಿ ಆ ಉಪಾಸಕನಿಗೆ ಅಪಾರ ದುಃಖವುಂಟಾಯಿತು. "ಏತಕ್ಕಾಗಿ ಈ ಶ್ರೇಷ್ಠರು ನನ್ನ ಮನೆಗೆ ಬರುತ್ತಿಲ್ಲ?" ಆತನಿಗೆ ಕಾರಣ ಅರ್ಥವಾಗದೇ ಆತನು ನೇರವಾಗಿ ಭಗವಾನರ ಬಳಿಗೆ ಹೋಗಿ ವಿಷಯ ತಿಳಿಸಿದನು. ಆಗ ಭಗವಾನರು ಭಿಕ್ಷುಗಳಿಗೆ ಕಾರಣ ಕೇಳಿದರು. ಅವರೆಲ್ಲರೂ ಸಕಾರಣವನ್ನೇ ನೀಡಿದರು. ಆಗ ಭಗವಾನರು ಅವರನ್ನು ಹೀಗೆ ಕೇಳಿದರು: "ಭಿಕ್ಷುಗಳೇ, ನಿಮ್ಮನ್ನು ಪರರು ಅರಹಂತರೆಂದು ಸಂಬೋಧಿಸಲು ನೀವು ಇಷ್ಟಪಡುವುದಿಲ್ಲವೇ?"
                "ಇಲ್ಲ ಭಗವಾನ್, ನಾವು ಇಷ್ಟಪಡುವುದಿಲ್ಲ."

                "ಭಿಕ್ಷುಗಳೇ, ಹಾಗಿದ್ದರೂ ಇದು ಕೇವಲ ಶ್ರದ್ಧಾವಂತನು ಆನಂದದಿಂದ, ತಾನು ವ್ಯಕ್ತಪಡಿಸುವ ರೀತಿ ಆಗಿದೆ ಹೊರತು ಬೇರಲ್ಲ. ಅಂತಹ ಆನಂದದ ವ್ಯಕ್ತತೆಯಲ್ಲಿ ತಪ್ಪು ಕಾಣದು. ಅದೂ ಅಲ್ಲದೆ ಬ್ರಾಹ್ಮಣನಿಗೆ ಅರಹಂತರ ಬಗೆಗಿನ ಗೌರವ ಹಾಗು ಆನಂದ ಅನಂತವಾಗಿದೆ, ಅಪರಿಮಿತವಾಗಿದೆ, ಅದರಿಂದ, ನೀವು ನಿಮ್ಮ ತೃಷ್ಣೆ ಕತ್ತರಿಸಿ, ಅರಹತ್ವಕ್ಕಿಂತ ಕಡಿಮೆಯಾದುದರಲ್ಲಿ ನೀವು ತೃಪ್ತರಾಗಬಾರದು" ಎಂದು ನುಡಿದು ಈ ಮೇಲಿನ ಗಾಥೆ ನುಡಿದರು. 

No comments:

Post a Comment