Thursday 1 October 2015

dhammapada/brahmanavagga/26.7/thepatienceofsariputta

ಬ್ರಾಹ್ಮಣರಿಗೆ (ಅರಹಂತರಿಗೆ) ಹಿಂಸಿಸದಿರಿ
ಬ್ರಾಹ್ಮಣನಿಗೆ ಹೊಡೆಯಬೇಡಿ,
ಹಾಗೆಯೇ ಹೊಡೆಸಿಕೊಂಡ ಬ್ರಾಹ್ಮಣ ಸಿಟ್ಟಾಗದಿರಲಿ,
ಬ್ರಾಹ್ಮಣನನ್ನು ಹೊಡೆಯುವಂತಹವನಿಗೆ ಧಿಕ್ಕಾರವಿರಲಿ,
ಹಾಗೆಯೇ ಸಿಟ್ಟಾದ ಬ್ರಾಹ್ಮಣನಿಗೆ ಮತ್ತಷ್ಟು ಧಿಕ್ಕಾರವಿರಲಿ.               (389)

ಬ್ರಾಹ್ಮಣನಿಗೆ ಪ್ರಿಯವಾದುದರಿಂದ ಮನಸ್ಸನ್ನು
ನಿಯಂತ್ರಿಸದಷ್ಟು ಸಿಗುವ ಲಾಭ ಅಲ್ಪವೇನಲ್ಲ.
ಹಿಂಸೆಯಿಂದ ಮನಸ್ಸು ವಿಮುಖವಾದಷ್ಟು
ದುಃಖವು ಅಷ್ಟಷ್ಟು ಇನ್ನಿಲ್ಲವಾಗುವುದು.           (390)

ಗಾಥ ಪ್ರಸಂಗ 26.7
ಸಾರಿಪುತ್ರರ ಸಹನಾಶೀಲತೆ


                ಶ್ರಾವಸ್ತಿಯಲ್ಲಿ ಒಮ್ಮೆ ಜನರ ಗುಂಪೊಂದು ವಿಶಿಷ್ಟವಾದ ಚಚರ್ೆಯಲ್ಲಿ ತೊಡಗಿದ್ದರು. ಅವರಲ್ಲಿ ಒಬ್ಬ ಉಪಾಸಕನು ಹೀಗೆ ನುಡಿದನು: ಓಹ್, ನಮ್ಮ ಗುರುಗಳು ಅದೆಂತಹ ಸಹನಾಶೀಲರೆಂದರೆ ಅವರಿಗೆ ಯಾರಾದರೂ ಬೈಯ್ದರೂ ಅಷ್ಟೇಕೆ ಹೊಡೆದರೂ ಸಹಾ ಅವರು ಲವಲೇಶವೂ ಕೋಪ ತಾಳಲಾರರು. ಅವರ ಸಹನಾಶೀಲತೆಯ ಮಟ್ಟ ಅಷ್ಟು ಉನ್ನತವಾದುದು. ಅದನ್ನು ಆಲಿಸಿದಂತಹ ಮಿಥ್ಯಾದೃಷ್ಟಿವುಳ್ಳ ಬ್ರಾಹ್ಮಣನು ಹೀಗೆ ಪ್ರಶ್ನಿಸಿದನು:  “ಯಾರದು ಕೋಪ ತಾಳದ ಮಾನವ.
                “ನಮ್ಮ ಪೂಜ್ಯ ಗುರುಗಳು. ಯಾವುದೇ ವ್ಯಕ್ತಿಯಾಗಲಿ ಅವರನ್ನು ಕೋಪ ತಾಳಿಸಲಾರರು.
                “ಹಾಗಾದರೆ ನಾನು ಅವರನ್ನು ಕೋಪೋದ್ರೇಕ ತಾಳುವಂತೆ ಮಾಡುತ್ತೇನೆ.
                “ನಿನ್ನ ಕೈಯಲ್ಲಿ ಸಾಧ್ಯವಾದರೆ ಮಾಡಿ ತೋರಿಸು.
                “ನನ್ನನ್ನು ನಂಬು, ನಾನು ಸಾಧಿಸುತ್ತೇನೆ.
                ಆ ಸಮಯದಲ್ಲೇ ಪೂಜ್ಯರಾದ ಸಾರಿಪುತ್ರರು ಆಹಾರಕ್ಕಾಗಿ ನಗರಕ್ಕೆ ಪ್ರವೇಶಿಸುತ್ತಿದ್ದರು. ಅದನ್ನು ಕಂಡ ಮಿಥ್ಯಾದೃಷ್ಟಿಯ ಬ್ರಾಹ್ಮಣ ಅವರ ಹಿಂದೆ ಹೋಗಿ, ಮುಷ್ಠಿಕಟ್ಟಿ ಪ್ರಬಲವಾಗಿ ಅವರ ಬೆನ್ನಿಗೆ ಗುದ್ದಿದನು. ಆ ಬಲಯುತವಾದ ಹೊಡೆದ ಬಿದ್ದರೂ ಸಾರಿಪುತ್ತರು ಸಹಿಸಿಕೊಂಡು ಏನೂ ಆಗಿಲ್ಲವೆಂಬಂತೆ, ತಿರುಗಿಯೂ ಸಹಾ ನೋಡದೆ ಮುಂದೆ ಗಂಭೀರವಾಗಿ ನಡೆಯುತ್ತಾ ಹೋದರು.
                ತಕ್ಷಣ ಆ ಬ್ರಾಹ್ಮಣನಿಗೆ ಪಶ್ಚಾತ್ತಾಪವುಂಟಾಯಿತು. ಓ ನಾನು ನಿಜಕ್ಕೂ ತಪ್ಪು ಮಾಡಿದೆನು. ನಿಜಕ್ಕೂ ಈ ಪೂಜ್ಯರಲ್ಲಿ ಉದಾತ್ತ ಗುಣಗಳಿವೆ ಎಂದುಕೊಂಡು ತಕ್ಷಣ ಅವರ ಕಾಲಿಗೆ ಬಿದ್ದನು, ಕ್ಷಮೆ ಯಾಚಿಸಿದನು.
                “ನನ್ನನ್ನು ಕ್ಷಮಿಸಿ ಭಂತೆ, ನಾನು ಪಾಪಿ.
                ‘ಏತಕ್ಕಾಗಿ.
                “ನಾನು ನಿಮಗೆ ಹೊಡೆದಿದ್ದೇನೆ.
                “ಆಯಿತು ಕ್ಷಮಿಸಿದ್ದೇನೆ.
                “ನೀವು ಕ್ಷಮಿಸಿದ್ದು ನಿಜವೇ ಆಗಿದ್ದರೆ, ಇನ್ನು ಮೇಲೆ ನನ್ನ ಮನೆಯಲ್ಲಿ ಆಹಾರ ಸ್ವೀಕರಿಸಬೇಕು.
                ನಂತರ ಆತನು ಪೂಜ್ಯರಿಗೆ ಆಹಾರ ದಾನ ಮಾಡಿದನು.
*  *  *
                ಆದರೆ ಸಾರಿಪುತ್ರರಿಗೆ ಹೊಡೆಯುತ್ತಿದ್ದುದನ್ನು ನೋಡಿದ ಕೆಲವರಿಗಂತೂ ಅಪಾರವಾದ ಕೋಪ ಉಂಟಾಯಿತು. ಅವರು ಹೀಗೆ ಭುಗಿಲೆದ್ದರು: ಯಾರು ಅತ್ಯಂತ ಪರಿಶುದ್ಧರೋ ಅಂತಹವರನ್ನು ಹೊಡೆಯಲು ಈತನಿಗೆಷ್ಟು ಧೈರ್ಯ? ಈತನಿಗೆ ಹೋಗಲು ಬಿಡಬಾರದು. ಈತನನ್ನು ಇಲ್ಲೇ ಕೊಂದುಬಿಡೋಣ ಎಂದು ಉದ್ರಿಕ್ತರಾದ ಅವರ ಒಂದು ಗುಂಪೇ ಸಿದ್ಧವಾಯಿತು. ಅವರ ಕೈಯಲ್ಲಿ ಇಟ್ಟಿಗೆ, ಕಲ್ಲು ಮತ್ತು ದಂಡಗಳನ್ನು ಕೈಯಲ್ಲಿ ಹಿಡಿದುಕೊಂಡು ಬ್ರಾಹ್ಮಣನ ಮನೆಯತ್ತ ಧಾವಿಸಿದರು. ಆದರೆ ಒಳಹೋಗದೆ ಈಚೆಯೇ ಕಾಯತೊಡಗಿದರು.
*  *  *
                ಇತ್ತ ಆಹಾರ ಮುಗಿಸಿದ ಸಾರಿಪುತ್ರರು ಹೋಗಲು ಎದ್ದರು. ತಮ್ಮ ಪಿಂಡಪಾತ್ರೆಯನ್ನು ಬ್ರಾಹ್ಮಣನ ಕೈಗೆ ನೀಡಿದರು. ಅದನ್ನು ಹಿಡಿದುಕೊಂಡು ಬ್ರಾಹ್ಮಣನು ಅವರನ್ನು ಹಿಂಬಾಲಿಸಿ ಮನೆಯಿಂದ ಹೊರಗೆ ಬಂದನು. ಆತನನ್ನು ನೋಡಿದ ಆ ಉದ್ರಿಕ್ತ ಗುಂಪು ಹೀಗೆ ಹೇಳಿತು: ಭಂತೆ, ಆ ಬ್ರಾಹ್ಮಣನಿಗೆ ತಮ್ಮ ಪಿಂಡಪಾತ್ರೆಯನ್ನು ಹಿಂತಿರುಗಿಸಲು ಆಜ್ಞೆ ಮಾಡಿರಿ.
                ಆಗ ಸಾರಿಪುತ್ರರು ಅವರಿಗೆ ಹೀಗೆ ಕೇಳಿದರು: ಉಪಾಸಕರೇ, ಏನಿದರ ಅರ್ಥ?”
                “ಈ ಬ್ರಾಹ್ಮಣನು ನಿಮಗೆ ಹೊಡೆದಿದ್ದಾನೆ, ಅದಕ್ಕಾಗಿ ನಾವು ಪ್ರತಿಕಾರವಾಗಿ ಆತನಿಗೆ ಸರಿಯಾದುದನ್ನೇ ನೀಡಲು ಬಂದಿರುವೆವು.
                “ನಿಮ್ಮ ಮಾತಿನ ಅರ್ಥವೇನು? ಆತನು ನಿಮಗೆ ಹೊಡೆದಿದ್ದಾನೆಯೇ? ಅಥವಾ ನನಗೋ?”
                “ತಮಗೆ ಭಂತೆ.
                ಹಾಗಿದ್ದರೆ ಕೇಳಿ, ಆತನು ನನಗೆ ಹೊಡೆದಿರಬಹುದು, ಆದರೆ ಅದಕ್ಕೆ ಕ್ಷಮೆ ಯಾಚಿಸಿದ್ದಾನೆ, ನಾನೂ ಸಹ ಕ್ಷಮಿಸಿರುವೆನು. ಹೀಗಾಗಿ ಈಗ ನೀವು ನಿಮ್ಮ ಪಾಡಿಗೆ ದಯವಿಟ್ಟು ಹೋಗಿರಿ. ಹಿಂಸೆಯಾಗಲಿ ಅಥವಾ ಪ್ರತಿಹಿಂಸೆಯಾಗಲಿ ಧರ್ಮವಲ್ಲ. ಹೀಗೆ ಸಾರಿಪುತ್ರರು ನುಡಿದಾಗ ಆಗ ಅವರೆಲ್ಲ ಹೊರಟುಹೋದರು. ಬ್ರಾಹ್ಮಣನು ಕೃತಜ್ಞತೆಯಿಂದ ವಂದಿಸಿ ಮನೆ ಸೇರಿದನು ಹಾಗು ಸಾರಿಪುತ್ರರು ಸಹಾ ವಿಹಾರಕ್ಕೆ ಹಿಂತಿರುಗಿದರು.
                ಇದೇ ವಿಷಯವಾಗಿ ಭಿಕ್ಷುಗಳು ಚಚರ್ಿಸಲಾರಂಭಿಸಿದರು- ಯಾವ ಬ್ರಾಹ್ಮಣನು ಅಗ್ರಶ್ರಾವಕರಿಗೆ ಹೊಡೆದನೋ ಆ ಬ್ರಾಹ್ಮಣನ ಕೈಯಿಂದಲೇ ಪೂಜ್ಯರು ಆಹಾರ ಸ್ವೀಕರಿಸಿದ್ದಾರೆ...! ಎಂದು ಚಚರ್ಿಸುತ್ತಿರುವಾಗ ಭಗವಾನರು ಅಲ್ಲಿಗೆ ಬಂದರು. ಅವರಿಂದಲೇ ಚಚರ್ೆಯ ವಿಷಯ ತಿಳಿದುಕೊಂಡು ಈ ಮೇಲಿನ ಗಾಥೆಯನ್ನು ನುಡಿದರು. ನಂತರ ಹೀಗೆ ಹೇಳಿದರು: ಭಿಕ್ಷುಗಳೇ, ಯಾವ ಬ್ರಾಹ್ಮಣನು ಸಹಾ ಇನ್ನೋರ್ವ ಬ್ರಾಹ್ಮಣನಿಗೆ ಹೊಡೆಯಲಾರ. ಗೃಹಸ್ಥ ಬ್ರಾಹ್ಮಣನು ಭಿಕ್ಷು ಬ್ರಾಹ್ಮಣನಿಗೆ ಹೊಡೆದಿರಬಹುದು. ಆದರೆ ಯಾವಾಗ ಮಾನವನು ಮೂರನೆಯ ಸಂತತ್ವ (ಅನಾಗಾಮಿ) ಪ್ರಾಪ್ತಿಮಾಡುವನೋ ಆಗ ಮಾತ್ರ ಆತನಲ್ಲಿ ಕೋಪವು ಪೂರ್ಣವಾಗಿ ನಾಶವಾಗುವುದು ಎಂದರು

No comments:

Post a Comment