Thursday 8 October 2015

dhammapada/brahmanavagga/26.30/candabhana

ಇರುವಿಕೆಯ ಬಯಕೆ ಇಲ್ಲದವನೇ ಬ್ರಾಹ್ಮಣ
ಯಾರು ಚಂದಿರನಂತೆ ವಿಮುಲನೋ,
ಶುದ್ಧನೋ, ಪ್ರಶಾಂತನೋ, ಅಕ್ಷೊಭನೋ,
ಭವದ (ಇರುವಿಕೆಯ) ಬಯಕೆಯನ್ನು
ಇಲ್ಲವಾಗಿಸಿಹನೋ ಅಂತಹನನ್ನು
ನಾನು ಬ್ರಾಹ್ಮಣ ಎನ್ನುತ್ತೇನೆ.      (413)

ಗಾಥ ಪ್ರಸಂಗ 26.30
ಚಂದಭಾನ ವಿಶಿಷ್ಟ ಪ್ರಭೆ

                ಪೂಜ್ಯ ಚಂದಭಾ ತನ್ನ ಹಿಂದಿನ ಜನ್ಮವೊಂದರಲ್ಲಿ ಕಸ್ಸಪ ಬುದ್ಧರ ಸ್ತೂಪಕ್ಕೆ ಚಂದನವನ್ನು ಅಪರ್ಿಸಿದ್ದನು. ಈ ಪೂಣ್ಯಫಲದಿಂದಾಗಿ ಅವನು ರಾಜಗೃಹದ ಶ್ರೀಮಂತ ಬ್ರಾಹ್ಮಣ ಗೃಹಸ್ಥನ ಮನೆಯಲ್ಲಿ ಜನಿಸಿದನು.
                ಅವನು ಜನ್ಮಿಸಿದಾಗಿನಿಂದ ಅವನ ಹೊಕ್ಕಳಿಂದ ಚಂದ್ರನಲ್ಲಿರುವ ಪ್ರಭೆಯಂತೆಯೇ ಬೆಳಕಿನ ಪ್ರಭೆಯು ಹೊರಹೊಮ್ಮುತ್ತಿತ್ತು. ಹೀಗಾಗಿ ಆತನಿಗೆ ಚಂದಾಭ ಎಂದು ನಾಮಕರಣ ಮಾಡಲಾಯಿತು.
                ಆಗ ಬ್ರಾಹ್ಮಣರು ಹೀಗೆ ಯೋಚಿಸಿದರು: ನಾವು ಈತನನ್ನು ಕರೆದುಕೊಂಡು ಲೋಕ ಸುತ್ತಿದ್ದರೆ, ಹಾಗು ಈ ಅವಕಾಶವನ್ನು ಬಳಸಿಕೊಂಡರೆ ಅಪಾರ ಸಂಪತ್ತು ಗಳಿಸಬಹುದು. ಹೀಗಾಗಿ ಅವರು ಈ ರೀತಿಯ ಪ್ರಚಾರ ಮಾಡತೊಡಗಿದರು. ಯಾರೇ ಆಗಲಿ ಈ ಬಾಲಕನ ಶರೀರವನ್ನು ತನ್ನ ಕೈಯಿಂದ ಮುಟ್ಟಿದರೆ ಅಂತಹವರಿಗೆ ಈ ರೀತಿಯ ಲಾಭಗಳೆಲ್ಲಾ ಆಗುವುವು. ಆಗ ಜನರು ಇದನ್ನು ನಂಬಿ ನೂರು, ಸಾವಿರ ತೆತ್ತು ಆ ಬಾಲಕನ ಶರೀರವನ್ನು ಸ್ಪಶರ್ಿಸುವ ಭಾಗ್ಯವನ್ನು ಪಡೆದರು. ಹೀಗೆಯೇ ಅವರು ಪ್ರಯಾಣ ಮಾಡುತ್ತಾ ಕೊನೆಗೆ ಶ್ರಾವಸ್ತಿಯ ನಗರಕ್ಕೂ ಹಾಗು ವಿಹಾರಕ್ಕೂ ನಡುವೆ ಇರುವ ಸ್ಥಳಕ್ಕೆ ಬಂದರು.
                ಆಗ ಶ್ರಾವಸ್ತಿಯಲ್ಲಿ 5 ಲಕ್ಷ ಕೋಟಿ ಜನರು ನೆಲೆಸಿದ್ದರು. ಅವರು ಭಿಕ್ಷುಗಳಿಗೆ ಮಧ್ಯಾಹ್ನಕ್ಕೆ ಮುಂಚೆ ಆಹಾರ ದಾನ ಅಪರ್ಿಸುತ್ತಿದ್ದರು. ಸಂಜೆ ಗಂಧ, ಪುಷ್ಪ, ವಸ್ತ್ರ, ಔಷಧಿ ಇತ್ಯಾದಿಗಳೊಂದಿಗೆ ಧಮ್ಮವನ್ನು ಆಲಿಸಲು ಹೋಗುತ್ತಿದ್ದರು. ಇವರನ್ನು ತಡೆದ ಆ ಬ್ರಾಹ್ಮಣರು ಹೀಗೆ ಕೇಳಿದರು: ಎಲ್ಲಿಗೆ ಹೋಗುತ್ತಿರುವಿರಿ? ಭಗವಾನರ ಧಮ್ಮವನ್ನು ಆಲಿಸಲು. ಓಹ್, ಬನ್ನಿ! ಅಲ್ಲಿ ನೀವು ಪಡೆಯುವಂತಹದ್ದೇನಿದೆ? ಇಲ್ಲಿ ನಮ್ಮ ಬಾಲಕನ ಶರೀರ ಮುಟ್ಟಿದ್ದೇ ಆದರೆ ನೀವು ಇಂತಿಂಥ ಮಹತ್ತರ ಲಾಭ ಪಡೆಯಬಹುದು ಎಂದರು.
                ನಿಮ್ಮ ಬಾಲಕನು ಪಡೆದಿರುವ ಈ ಮಾನವಾತೀತ ಪ್ರಭೆಯು ಎಷ್ಟರಮಟ್ಟಿಗದು. ನಮ್ಮ ಗುರುಗಳು ಮಾತ್ರವೇ ಅಸಂಖ್ಯಾತ ಅದ್ವಿತೀಯ ಮಾನವಾತೀತ ಬಲಗಳನ್ನು ಪಡೆದಿರುವರು. ಬೇಕಾದರೆ ಬಂದು ಪರೀಕ್ಷಿಸಿ ಎನ್ನುತ್ತಾ ಯುವಕನನ್ನು ವಿಹಾರಕ್ಕೆ ಕರೆದೊಯ್ದರು.
                ಆ ಯುವಕ ಚಂದಭಾನು ಭಗವಾನರನ್ನು ಸಮೀಪಿಸುತ್ತಿದ್ದಂತೆಯೇ ಆತನ ಚಂದ್ರಪ್ರಭೆಯು ಅಲೌಕಿಕ ಶಕ್ತಿಯು ಮಾಯವಾಯಿತು. ಆಗ ಆತನು ಇದ್ದಲಿನಂತೆ ಕಳಾಹೀನವಾದನು. ಆತನು ಜೇತವನದಿಂದ ಹೊರ ಹೋದ ಕೂಡಲೇ ಪುನಃ ಚಂದ್ರಪ್ರಭೆಯು ಆತನ ಹೊಕ್ಕಳಿಂದ ಕಾಣಿಸತೊಡಗಿತು. ಆತನು ಪುನಃ ಭಗವಾನರ ಸಮ್ಮುಖದಲ್ಲಿ ಬಂದಾಗ ಪುನಃ ಪ್ರಭೆ ಕಳೆದುಕೊಂಡು ಕಳಾಹೀನನಾದನು. ಆಗ ಚಂದಭಾನು ಹೀಗೆ ಯೋಚಿಸಿದನು: ಖಂಡಿತವಾಗಿ ಈ ಭಗವಾನರು ನನ್ನ ಪ್ರಭೆಯನ್ನು ಅದೃಶ್ಯ ಮಾಡುವ ಮಂತ್ರ ಬಲ್ಲವರಾಗಿದ್ದಾರೆ.
                ಹೀಗಾಗಿ ಆತನು ಭಗವಾನರ ಬಳಿಗೆ ಹೋಗಿ ಹೀಗೆ ಕೇಳಿದನು: ನನ್ನ ಪ್ರಭೆಯನ್ನು ಮರೆಮಾಡುವ ಮಂತ್ರವನ್ನು ನೀವು ಬಲ್ಲಿರಾ?”
                “ಹೌದು, ನಾನು ಬಲ್ಲೆನು.
                “ಹಾಗಾದರೆ ನನಗೆ ಕಲಿಸಿ.
                “ನಾನು ಗೃಹಸ್ಥರಿಗೆ ಅದೆಲ್ಲಾ ಕಲಿಸಲಾರೆ, ಪಬ್ಬಜ್ಜ ಸ್ವೀಕರಿಸಿ, ಭಿಕ್ಷು ಜೀವನಕ್ಕೆ ಬಂದರೆ ಮಾತ್ರ ಕಲಿಸುವೆನು.
                ಆಗ ಚಂದಭಾನು ಆ ವಿದ್ಯೆಯನ್ನು ಕಲಿಯುವದಕ್ಕೋಸ್ಕರ ಭಿಕ್ಷುವಾಗಲು ನಿರ್ಧರಿಸಿದನು. ಆತನು ತನ್ನ ಬ್ರಾಹ್ಮಣರಿಗೆ ಹೀಗೆ ಹೇಳಿದನು: ನಾನು ಆ ವಿದ್ಯೆಯನ್ನು ಕಲಿತೊಡನೆಯೇ ಇಡೀ ಭಾರತಕ್ಕೆ ಅಗ್ರಗಣ್ಯನಾಗುತ್ತೇನೆ. ನೀವೆಲ್ಲಾ ಇಲ್ಲೇ ಇರಿ, ನಾನು ಈ ವಿದ್ಯೆಯನ್ನು ಕಲಿತು ಕೆಲ ದಿನಗಳಲ್ಲಿ ಹಿಂತಿರುಗುವೆನು ಎಂದು ಹೇಳಿ, ನಂತರ ಭಗವಾನರ ಬಳಿಗೆ ಹೋಗಿ ಭಿಕ್ಷು ದೀಕ್ಷೆ ಪಡೆದನು. ನಂತರ ಭಗವಾನರು ಆತನಿಗೆ ಕಾಯಗತಾನುಸತಿ ಭಾವನ ಧ್ಯಾನವನ್ನು ಹೇಳಿಕೊಟ್ಟರು. ಇದು ಏತಕ್ಕಾಗಿ? ಎಂದು ಚಂದನು ಕೇಳಿದನು. ನೀನು ಪಡೆಯಬೇಕಾಗಿರುವ ಸಿದ್ಧಿಗೆ ಪೂರ್ವವಾಗಿ ಇದನ್ನು ಕಲಿಯಲೇಬೇಕಿದೆ ಎಂದರು.
                ಕಾಲಕಾಲಕ್ಕೆ ಆ ಬ್ರಾಹ್ಮಣರು ಆತನ ಬಳಿಗೆ ಬಂದು ಸಿದ್ಧಿಯಾಯಿತೇ? ಎಂದು ಕೇಳಿದಾಗ ಆತನು ಇನ್ನು ಆಗಿಲ್ಲ, ಕಲಿಯುತ್ತಿದ್ದೆನೆ ಎನ್ನುತ್ತಿದ್ದನು. ಆದರೆ ಕೆಲವೇ ದಿನಗಳಲ್ಲಿ ಆತನು ಆ ಧ್ಯಾನದಿಂದಾಗಿ ಅರಹಂತನೇ ಆದನು. ಆಗ ಆತನಿಗೆ ಇದೆಲ್ಲಾ ಭಗವಾನರು ತನಗೆ ಅರಹಂತತ್ವ ಪ್ರಾಪ್ತಿ ಮಾಡಲೆಂದು ಛಂದಇದ್ದಿಯ ಪ್ರಯೋಗ ಮಾಡಿದ್ದಾರೆಂದು ತಿಳಿಯಿತು (ಇಚ್ಛಾಶಕ್ತಿಯಿಂದ ಮಾಡುವ ಅಲೌಕಿಕ ಪವಾಡ).
                ಆಗ ಆ ಬ್ರಾಹ್ಮಣರು ಪುನಃ ಬಂದು ಆತನಲ್ಲಿ ಹೀಗೆ ಕೇಳಿದರು: ಸಿದ್ಧಿಯಾಯಿತೇ?”
                “ಆಗಿದೆ. ಆದರೆ ಇತ್ತ ಬರಬೇಡಿ, ನೀವು ನಿಮ್ಮ ನಗರಗಳಿಗೆ ಹಿಂತಿರುಗಿ, ನಾನು ಪುನಃ ಹಿಂತಿರುಗಲಾರದಂತಹ ಸ್ಥಿತಿಯನ್ನು (ನಿಬ್ಬಾಣ) ಪ್ರಾಪ್ತಿಮಾಡಿರುವೆ ಎಂದನು.

                ಇದನ್ನು ಆಲಿಸಿದ ಭಿಕ್ಷುಗಳು ಇವನು ಸುಳ್ಳು ಹೇಳುತ್ತಿರಬಹುದೆಂದು ಭಗವಾನರಿಗೆ ದೂರು ನೀಡಲು ಹೋದಾಗ, ಭಗವಾನರು ಆತನು ಅರಹಂತನೆಂದು ಸ್ಪಷ್ಟಪಡಿಸಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment