Thursday 1 October 2015

dhammmapada/brahmanavagga/26.9/sariputtasgratitude

ಕೃತಜ್ಞತೆಯೇ ಮೊದಲ ಪಾಠ
ಯಾರಿಂದ ಒಬ್ಬನು ಸಮ್ಮಾಸಂಬುದ್ಧರ
ಉಪದೇಶವನ್ನು ತಿಳಿಯಲ್ಪಟ್ಟಿರುವನೋ,
ಅಂತಹವರನ್ನು ಹೇಗೆ ಬ್ರಾಹ್ಮಣನು
ಅಗ್ನಿಹೋತ್ರವನ್ನು ಪೂಜಿಸುವನೋ ಹಾಗೇ
ಗೌರವದಿಂದ ನಮಸ್ಕರಿಸಬೇಕು.  (392)

ಗಾಥ ಪ್ರಸಂಗ 26.9
ಸಾರಿಪುತ್ರರ ಕೃತಜ್ಞತೆ

                ಸಾರಿಪುತ್ರರ ಬಗ್ಗೆ ಸಂಕ್ಷಿಪ್ತ ವಿವರಣೆಯನ್ನು ಈಗಾಗಲೇ ಅಧ್ಯಾಯ 10ರಲ್ಲಿ ಏಳನೆಯ ಪ್ರಸಂಗದಲ್ಲಿ ವಿವರಿಸಲಾಗಿದೆ. (ಗಾಥೆ 137 ರಿಂದ 140).
                ಸಾರಿಪುತ್ರರು ಧಮ್ಮವನ್ನು ಮೊದಲು ಪೂಜ್ಯ ಅಸ್ಸಜಿಯವರಿಂದ ಕೇಳಿದ್ದರು. ಅದು ಕೇವಲ ನಾಲ್ಕು ವಾಕ್ಯಗಳ ಗಾಥೆಯಾಗಿದ್ದರೂ ಸಹಾ ಅದರ ಎರಡು ವಾಕ್ಯ ಆಲಿಸಿಯೇ ಸಾರಿಪುತ್ರರು ಸೋತಪನ್ನರಾಗಿದ್ದರು. ಹೀಗಾಗಿ ಅಂದಿನಿಂದ ಅಸ್ಸಜಿಯವರು ಎಲ್ಲೇ ವಾಸಿಸಲಿ, ಆ ದಿಕ್ಕಿನೆಡೆಗೆ ಕೈಜೋಡಿಸಿ ವಂದಿಸುತ್ತಿದ್ದರು. ಆ ದಿಕ್ಕಿನೆಡೆಗೆ ತಲೆಯಿಟ್ಟು ಮಲಗುತ್ತಿದ್ದರು. ಒಮ್ಮೆ ಅವರು ಅಸ್ಸಜಿಯಿದ್ದ ದಿಕ್ಕಿನೆಡೆಗೆ ಸಾರಿಪುತ್ರರು ವಂದಿಸುತ್ತಿರುವಾಗ, ಅವರನ್ನು ಕಂಡ ಕೆಲ ಭಿಕ್ಷುಗಳು ಹೀಗೆ ನಿರ್ಧರಿಸಿದರು. ಓಹ್, ಸಾರಿಪುತ್ರರು ಮಿಥ್ಯಾದೃಷ್ಟಿಗೆ ಗುರಿಯಾಗಿದ್ದಾರೆ. ಅವರು ದಿಕ್ಕುಗಳನ್ನು ಪೂಜಿಸುತ್ತಿದ್ದಾರೆ ಅಷ್ಟಕ್ಕೇ ಸುಮ್ಮನಾಗದೆ ಅವರು ಬುದ್ಧರಿಗೂ ಈ ಬಗ್ಗೆ ದೂರನ್ನು ನೀಡಿದರು.
                ಭಗವಾನರಿಗೆ ನೈಜ್ಯ ವಿಷಯ ತಿಳಿದಿದ್ದರೂ ಆ ಭಿಕ್ಷುಗಳಲ್ಲಿ ಪರಿವರ್ತನೆ ಉಂಟುಮಾಡಲು, ಅವರು ಸಾರಿಪುತ್ರರನ್ನು ಕರೆಯಿಸಿ ಹೀಗೆ ಕೇಳಿದರು: ಸಾರಿಪುತ್ರ, ನೀನು ದಿಕ್ಕುಗಳನ್ನು ಪೂಜಿಸುತ್ತಿರುವೆಯಂತೆ, ಇದು ನಿಜವೇ?

                ಭಗವಾನ್ ತಾವೇ ನನ್ನನ್ನು ಚೆನ್ನಾಗಿ ಬಲ್ಲಿರಿ. ನಾನು ಹಾಗೇ ಮಾಡಬಲ್ಲೆನೇ? ಎನ್ನುತ್ತಾ ಅವರು ನಿಜವಾದ ಕಾರಣ ತಿಳಿಸಿದರು. ಆಗ ಭಗವಾನರು ಹೀಗೆಂದರು: ಭಿಕ್ಷುಗಳೇ, ಸಾರಿಪುತ್ರರು ಅಸ್ಸಜಿಯವರ ಮೇಲಿನ ಕೃತಜ್ಞತೆಯಿಂದಾಗಿ ಹೀಗೆ ಮಾಡುತ್ತಿದ್ದಾರೆ ಅಷ್ಟೇ, ಅದು ಪ್ರಶಂಸನೀಯ ಎಂದು ನುಡಿದು ಈ ಮೇಲಿನ ಗಾಥೆ ನುಡಿದರು. 

No comments:

Post a Comment