Thursday 23 April 2015

dhammapada/papavagga/9.11/bhikkhus

ಕಮ್ಮ ನಿಯಮದಿಂದ ಯಾರೂ ಸಹಾ ತಪ್ಪಿಸಿಕೊಳ್ಳಲಾರರು
ಆಕಾಶದಲ್ಲಿಯಾಗಲಿ, ಸಮುದ್ರದಲ್ಲಾಗಲಿ, ಪರ್ವತದ ಗವಿಗಳಲ್ಲಾಗಲಿ, ಇಡೀ ಪೃಥ್ವಿಯಲ್ಲಿ ಎಲ್ಲಿಯೂ ಸಹಾ ಒಬ್ಬನು ಕರ್ಮಫಲದಿಂದ ತಪ್ಪಿಸಿ ಕೊಳ್ಳಲಾಗುವುದಿಲ್ಲ.            (127)
ಗಾಥ ಪ್ರಸಂಗ 9:11
ಪಾಪ ಫಲದಿಂದ ತಪ್ಪಿಸಿಕೊಳ್ಳಲಾಗುವ ಸ್ಥಳವೇ ಇಲ್ಲ

          ಭಿಕ್ಷುಗಳ ಗುಂಪೊಂದು ಭಗವಾನರಿಗೆ ವಂದಿಸಲೆಂದು ಹಳ್ಳಿಯ ದಾರಿಯಲ್ಲಿದ್ದರು. ಅಲ್ಲಿಯ ಜನರು ಭಿಕ್ಷುಗಳಿಗಾಗಿ ಆಹಾರವನ್ನು ಬೇಯಿಸುತ್ತಿದ್ದರು. ಆಗ ಅಚಾತುರ್ಯದಿಂದಾಗಿ ಮನೆಯೊಂದು ಸುಟ್ಟು, ಬೆಂಕಿಯ ಜ್ವಾಲೆಯು ಮೇಲ್ಭಾಗದಲ್ಲೆಲ್ಲಾ ತೇಲಾಡಿತು. ಅದೇ ಸಮಯದಲ್ಲಿ ಕಾಗೆಯೊಂದು ಆ ಬೆಂಕಿಯ ಜ್ವಾಲೆಗೆ ಸಿಲುಕಿ ಸುಟ್ಟು ಭಸ್ಮವಾಯಿತು. ಆ ಭಿಕ್ಷುಗಳು ಭಗವಾನರ ಬಳಿಗೆ ಬಂದು ಸ್ವಲ್ಪಕಾಲದ ನಂತರ ಈ ವಿಷಯವನ್ನು ತಿಳಿಸಿ ಕಾಗೆಯ ಮರಣಕ್ಕೆ ಕಾರಣವನ್ನು ಕೇಳಿದರು. ಆಗ ಭಗವಾನರು ಆ ಕಾಗೆಯ ಹಿಂದಿನ ಜನ್ಮವನ್ನು ತಿಳಿಸಿದರು.
          ಭಿಕ್ಷುಗಳೇ, ಹಿಂದೆ ರೈತನೊಬ್ಬನ ಬಳಿ ಅತಿ ಸೋಮಾರಿಯಾದ ಎತ್ತೊಂದು ಇತ್ತು. ಇದರ ಸೋಮಾರಿತನ ಸಹಿಸಲಾರದೆ ಆ ರೈತನು ಕೋಪದಿಂದ ಆ ಎತ್ತನ್ನು ಕಟ್ಟಿಹಾಕಿ ಬೆಂಕಿ ಹಚ್ಚಿದನು, ಆ ಎತ್ತು ಸತ್ತಿತು. ಆ ಪಾಪ ಫಲದಿಂದಾಗಿ ಆ ರೈತನು ನಿರಯದಲ್ಲಿ ಹುಟ್ಟಿ ದುಃಖ ಅನುಭವಿಸಿದನು. ನಂತರ ಅಲ್ಲಿಂದ 7 ಜನ್ಮತಾಳಿ 7 ಜನ್ಮದಲ್ಲೂ ಸುಟ್ಟು ಸತ್ತನು. ಆ ಕಾಗೆಯ ಅಂದಿನ ಪಾಪಕರ್ಮವೇ ಈ ಹೊಸ ದುಃಖಕ್ಕೆ ಕಾರಣವಾಗಿದೆ.
          ಆಗ ಅಲ್ಲೇ ಇದ್ದ ಇನ್ನೊಂದು ಭಿಕ್ಷುಗಳ ಗುಂಪು ತಮ್ಮ ಘಟನೆಯನ್ನು ಹೇಳಿದರು. ಅವರು ಸಹಾ ಬುದ್ಧರನ್ನು ಭೇಟಿ ಮಾಡಲು ಬರುತ್ತಿದ್ದರು. ಅವರು ಸಮುದ್ರ ಮಾರ್ಗವಾಗಿ ಬರುತ್ತಿರುವಾಗ, ಆ ಹಡಗು ಚಲಿಸದೆ ನಿಂತುಬಿಟ್ಟಿತು. ಆಗ ಹಡಗಿನಲ್ಲಿದ್ದವರಿಗೆ ತಮ್ಮ ಹಡಗಿನಲ್ಲಿ ಯಾರೋ ದುರಾದೃಷ್ಟವಂತರು ಇದ್ದಾರೆ ಎಂದು ಅನುಮಾನ ಬಂದು ಚೀಟಿ ಎತ್ತುವ ಮೂಲಕ ಪರೀಕ್ಷಿಸಿದರು. ಆದರೆ ಮೂರು ಬಾರಿಯು ಆ ಹಡಗಿನ ನಾಯಕನ ಪತ್ನಿಯ ಹೆಸರೇ ಬಂದಿತು. ಆಗ ಕಠೋರನಾದ ಆ ಹಡಗಿನ ನಾಯಕರು ಈ ಒಬ್ಬ ದುರಾದೃಷ್ಟವಂತೆಯ ಬದಲಾಗಿ ಎಲ್ಲರೂ ಸಾಯುವುದು ಬೇಡ, ಆಕೆಯ ಕತ್ತಿಗೆ ಮರಳಿನ ಮಡಿಕೆ ಕಟ್ಟಿ, ನೀರಿಗೆ ಹಾಕಿಬಿಡಿ ಎಂದು ಆಜ್ಞೆ ಮಾಡಿದನು. ಆಗ ಆಕೆಯನ್ನು ನೀರಿಗೆ ಎಸೆಯಲಾಯಿತು. ನಂತರ ಆ ಹಡಗು ಚಲಿಸಿತು. ಈ ಘಟನೆಗೆ ಕಾರಣವನ್ನು ಆ ಭಿಕ್ಷುಗಳು ಭಗವಾನರಲ್ಲಿಗೆ ಕೇಳಿದಾಗ ಭಗವಾನರು ಹೀಗೆ ಉತ್ತರಿಸಿದರು:
          ಭಿಕ್ಷುಗಳೇ, ಹಿಂದಿನ ಜನ್ಮದಲ್ಲಿ ಆ ಸ್ತ್ರೀಯ ಬಳಿ ನಾಯಿಯೊಂದು ಇತ್ತು. ಆಕೆ ಎಲ್ಲೇ ಹೋಗಲಿ, ಅದು ಆಕೆಯನ್ನು ಹಿಂಬಾಲಿಸುತ್ತಿತ್ತು. ಏಕೆಂದರೆ ಆ ನಾಯಿಯು ಆಕೆಯ ಹಿಂದಿನ ಜನ್ಮದಲ್ಲಿ ಆಕೆಯ ಗಂಡನಾಗಿತ್ತು. ನಾಯಿಯು ಆಕೆಯನ್ನು ಸದಾ ಹಿಂಬಾಲಿಸುವುದುನ್ನು ಕಂಡ ಕೆಲ ಪೋಕರಿಗಳು ಆಕೆಯನ್ನು ರೇಗಿಸುತ್ತಿದ್ದರು. ಇದರಿಂದ ಕ್ರುದ್ಧಳಾದ ಆಕೆಯು ನಾಯಿಯನ್ನು ಕೊಲ್ಲಲು ನಿಶ್ಚಯಿಸಿದಳು. ಆಕೆ ಮಡಿಕೆಯೊಂದಕ್ಕೆ ಮಣ್ಣನ್ನು ತುಂಬಿ ಅದನ್ನು ನಾಯಿಯ ಕೊರಳಿಗೆ ಕಟ್ಟಿ ನೀರಿನಲ್ಲಿ ಬಿಸಾಡಿದಳು, ಆ ನಾಯಿಯು ಮುಳುಗಿ ಸತ್ತಿತು. ಈ ಕರ್ಮಫಲದ ಪರಿಣಾಮದಿಂದಾಗಿ ಆಕೆಯು ದುರ್ಗತಿಯಲ್ಲಿ ಅಪಾರ ನರಳಿದಳು. ನಂತರದ ಜನ್ಮಗಳಲ್ಲಿ ಹೀಗೆಯೇ ನೀರಿನಲ್ಲಿ ಮುಳುಗಿಸಲ್ಪಟ್ಟು ಸತ್ತಳು. ಆ ಕಾರಣದಿಂದಾಗಿಯೇ ಆಕೆ ಈ ಜನ್ಮದಲ್ಲೂ ಹಾಗೇ ಸತ್ತಿದ್ದಾಳೆ.

          ಆಗ ಮೂರನೆಯ ಭಿಕ್ಷುಗಳ ಗುಂಪು ತಮ್ಮ ಅನುಭವವನ್ನು ಹೇಳಿದರು: ಈ ಗುಂಪಿನ ಭಿಕ್ಷುಗಳು ಏಳು ಜನರಿದ್ದರು. ಅವರು ಬುದ್ಧರಿಗೆ ವಂದಿಸಲೆಂದು ಬರುತ್ತಿದ್ದಾಗ, ಅವರು ಗುಹೆಯೊಂದರಲ್ಲಿ ರಾತ್ರಿ ಕಳೆದರು. ಆದರೆ ಮಧ್ಯರಾತ್ರಿಯಲ್ಲಿ ದೊಡ್ಡ ಬಂಡೆಯು ಜಾರಿ ಆ ಗುಹೆಯನ್ನು ಮುಚ್ಚಿಬಿಟ್ಟಿತು. ಆಗ ಸಮೀಪದ ಭಿಕ್ಷುಗಳು ಈ ಏಳು ಭಿಕ್ಷುಗಳು ಅಲ್ಲಿರುವುದನ್ನು ಕಂಡಿದ್ದರು. ಅವರು ಈ ಏಳು ಭಿಕ್ಷುಗಳನ್ನು ಕಾಪಾಡಲು ಏಳು ಹಳ್ಳಿಗಳ ಜನರನ್ನು ಕರೆತಂದರು. ಆದರೂ ಸಹಾ ಏಳು ದಿನಗಳವರೆಗೆ ಆ ಬಂಡೆಯು ಅಲ್ಲಾಡಲಿಲ್ಲ. ಅವರು ಒಳಗೆ ಉಪವಾಸದಿಂದಿದ್ದರು. ಏಳನೆಯ ದಿನ ಆ ಬಂಡೆಯು ಆಶ್ಚರ್ಯಕರವಾಗಿ ತಾನಾಗಿಯೇ ಪಕ್ಕಕ್ಕೆ ಜಾರಿ, ಆ ಭಿಕ್ಷುಗಳು ಹೊರಬಂದರು. ಇದಕ್ಕೆ ಕಾರಣವನ್ನು ಆ ಭಿಕ್ಷುಗಳು ಭಗವಾನರಲ್ಲಿ ಕೇಳಿದರು. ಆಗ ಭಗವಾನರು ಅವರ ಹಿಂದಿನ ಜನ್ಮವನ್ನು ತಿಳಿಸಿದರು. ಹಿಂದಿನ ಜನ್ಮದಲ್ಲಿ ಅವರು ಗೋವುಗಳನ್ನು ಕಾಯುತ್ತಿದ್ದರು. ಆಗ ಅವರು ಓತಿಕೇತವೊಂದು ಬಿಲದಲ್ಲಿ ನುಗ್ಗಿರುವುದನ್ನು ಕಂಡರು. ಅವರು ಬಿಲವನ್ನು ಮುಚ್ಚಿದರು. 7 ದಿನಗಳ ನಂತರ ಅವರಿಗೆ ನೆನಪಾಗಿ ಆ ಬಿಲವನ್ನು ತೆರೆದು ಅದನ್ನು ಕಾಪಾಡಿದರು. ಆ ಕರ್ಮಫಲದ ಪರಿಣಾಮವೇ ಅವರಿಗೆ ಈ ಜನ್ಮದಲ್ಲಿ ಈ ಗತಿಯಾಗಿತ್ತು. ಹಾಗೆ ಹೇಳಿ ಭಗವಾನರು ಈ ಗಾಥೆಯನ್ನು ನುಡಿದರು.

No comments:

Post a Comment