Wednesday 1 April 2015

dhammapada/sahassavagga/8.2/baahiya

ಅರ್ಥಪೂರ್ಣವಾದ ಗಾಥವೊಂದೇ ಸಾಕು
ಅನರ್ಥಕಾರಿ ಪದಗಳಿಂದ ಕೂಡಿರುವ ಸಹಸ್ರ ಗಾಥೆಗಳಿಗಿಂತ ಕೇಳಿದಾಗ ಶಾಂತಿಯನ್ನುಂಟುಮಾಡುವ ಒಂದೇ ಒಂದು ಗಾಥೆಯು ಶ್ರೇಷ್ಠವಾದುದು            (101)
ಗಾಥ ಪ್ರಸಂಗ 8:2
ಬಾಹಿಯನ ಅತಿ ವೇಗದ ಅರಹಂತ ಪ್ರಾಪ್ತತೆ

                ವರ್ತಕರ ಸಮೂಹವೊಂದು ಸಮುದ್ರದಲ್ಲಿ ಪ್ರಯಾಣ ಬೆಳೆಸಿತು. ಆದರೆ ಅವರ ಸಣ್ಣ ಹಡಗು ನಾಶವಾಗಿ, ಬಾಹಿಯನೆಂಬುವವನ ಹೊರತು ಎಲ್ಲರೂ ಸತ್ತರು. ಆದರೆ ಉಳಿದವನಾದ ಆತನು ನಗ್ನತೆಯನ್ನು ಮರದ ತೊಗಟೆಗಳಿಂದ ಮುಚ್ಚಿಕೊಂಡು, ಸುಪ್ಪಾರಕ ಎಂಬ ಬಂದರಿಗೆ ಬಂದನು. ಜನರಿರುವ ಸ್ಥಳದಲ್ಲಿ ಬಂದು ಕುಳಿತನು. ದಾರಿಹೋಕರು ಆತನಿಗೆ ತಿನ್ನಲು ಆಹಾರವನ್ನು ನೀಡಿದರು. ಅಷ್ಟೇ ಅಲ್ಲ, ಆತನಿಗೆ ಪವಿತ್ರ ವ್ಯಕ್ತಿಯೆಂದು ಭಾವಿಸಿ, ಆತನಿಗೆ ಗೌರವಿಸಿದರು. ಕೆಲವರು ಆತನಿಗೆ ವಸ್ತ್ರ ನೀಡಲು ಮುಂದೆ ಬಂದಾಗ, ಆತನು ಅದನ್ನು ಸ್ವೀಕರಿಸಲು ನಿರಾಕರಿಸಿದನು. ಏಕೆಂದರೆ ಅದನ್ನು ಪಡೆದರೆ ತನಗೆ ಗೌರವ ಸತ್ಕಾರ ಸಿಗಲಾರದು ಎಂದು ಆತನು ಭಯಪಟ್ಟಿದ್ದನು. ಕೆಲವರು ಆತನನ್ನು ಅರಹಂತನೆಂದು ಕರೆಯಲಾರಂಭಿಸಿದರು. ಆತನು ಸಹಾ ತಾನು ಅರಹಂತನಾಗಿರಬಹುದು ಎಂದು ಭಾವಿಸಿದನು. ಆತನ ಈ ವಿಚಿತ್ರ ಉಡುಗೆ ಕಂಡು ಜನರು ಆತನಿಗೆ ಬಾಹಿಯ ದಾರುಚಿರಿಯ ಎಂದು ಕರೆಯಲಾರಂಭಿಸಿದರು.
                ಆಗ ಮಹಾ ಬ್ರಹ್ಮನಿಗೆ ಬಾಹಿಯನಿಗೆ ಸರಿದಾರಿಗೆ ತರಬೇಕೆಂದು ಇಚ್ಛೆಯಾಯಿತು. ಮಹಾ ಬ್ರಹ್ಮನು ಮತ್ತು ಬಾಹಿಯನು ಹಿಂದಿನ ಜನ್ಮದಲ್ಲಿ ಮಿತ್ರರಾಗಿದ್ದರು. ಹೀಗಾಗಿ ಮಹಾಬ್ರಹ್ಮನು ಆತನಿಗೆ ರಾತ್ರಿಯಲ್ಲಿ ಕಾಣಿಸಿಕೊಂಡು ಹೀಗೆ ಹೇಳಿದನು: ಓ ಬಾಹಿಯ, ನೀನಿನ್ನೂ ಅರಹಂತನಾಗಿಲ್ಲ, ಅಷ್ಟೇ ಏಕೆ, ಅಂತಹ ಗುಣಗಳು ಸಹಾ ನಿನ್ನಲ್ಲಿಲ್ಲ. ಆಗ ಬಾಹಿಯನು ಹೀಗೆ ಕೇಳಿದನು: ನಾನು ಒಪ್ಪುವೆನು, ಆದರೆ ಲೋಕದಲ್ಲಿ ಅರಹಂತರು ಇದ್ದಾರೆಯೇ? ನಾನು ಅವರಂತೆ ಆಗಬೇಕಾಗಿದೆ ಎಂದನು. ಆಗ ಮಹಾಬ್ರಹ್ಮನು ಆತನಿಗೆ ಶ್ರಾವಸ್ತಿಗೆ ಹೋಗಿ ಬುದ್ಧರನ್ನು ಕಾಣುವಂತೆ ಸಲಹೆ ನೀಡಿದರು.
                ಬಾಹಿಯನು ಬುದ್ಧರನ್ನು ಕಾಣಲು ಶ್ರಾವಸ್ತಿಗೆ ಬಂದನು. ಆತನು ಅತಿಯಾಗಿ ಒತ್ತಡದಿಂದ ಕೂಡಿದ್ದನು. ಕೊನೆಗೂ ಆತನು ಬುದ್ಧರನ್ನು, ಅವರನ್ನು ಹಿಂಬಾಲಿಸುತ್ತಿದ್ದ ಭಿಕ್ಷು ಸಮೂಹವನ್ನು ಕಂಡನು. ಆತನು ಬುದ್ಧರಲ್ಲಿಗೆ ಹೋಗಿ ವಂದಿಸಿ ತನಗೆ ಧಮ್ಮವನ್ನು ಬೋಧಿಸಿ ಎಂದು ಕೇಳಿಕೊಂಡನು. ಆಗ ಬುದ್ಧರು ಧಮ್ಮ ಬೋಧನೆಗೆ ಸಕಾಲವಲ್ಲ ಎಂದರು. ಏಕೆಂದರೆ ಆತನು ದೀರ್ಘ ಪ್ರಯಾಣದ ನಂತರ ಬಂದಿದ್ದನು. ಅವರನ್ನು ಕಂಡು ಆನಂದೋದ್ವೇಗದಿಂದಲೂ ಕೂಡಿದ್ದನು. ಇಂತಹ ಸ್ಥಿತಿಯಲ್ಲಿ ಆತನಿಗೆ ಬೋಧಿಸಿದರೆ ಆತನು ಯೋಗ್ಯವಾಗಿ ಧಮ್ಮವನ್ನು ಗ್ರಹಿಸಲಾರ ಎಂದು ಅರಿತಿದ್ದರು. ಆದರೆ ಬಾಹಿಯನು ಹೀಗೆ ಹೇಳಿದನು: ಭಂತೆ, ನನ್ನ ಜೀವದ ಆಯಸ್ಸಾಗಲಿ ಅಥವಾ ನಿಮ್ಮ ಆಯಸ್ಸಾಗಲಿ ನನಗೆ ತಿಳಿದಿಲ್ಲ. ಯಾವ ಅಪಾಯ ಬರುತ್ತದೋ ತಿಳಿದಿಲ್ಲ. ಆದ್ದರಿಂದ ದಯೆಯಿಟ್ಟು ನನಗೆ ಧಮ್ಮ ಬೋಧಿಸಿ. ಭಗವಾನರು ಬಾಹಿಯನು ಈಗ ಧಮ್ಮ ಅರಿಯಲು ಸಿದ್ಧನಾಗಿದ್ದಾನೆ ಎಂದು ಅರಿತರು ಹಾಗು ಆತನ ಅಲ್ಪ ಆಯಸ್ಸು ಗ್ರಹಿಸಿ ಆತನ ತೀಷ್ಣ ಪ್ರಜ್ಞಾಶೀಲತೆಯನ್ನು ಕಂಡು ಹೀಗೆ ಅತ್ಯಂತ ಸಂಕ್ಷಿಪ್ತವಾಗಿ ಹೀಗೆ ಬೋಧನೆ ಮಾಡಿದರು: ಬಾಹಿಯಾ, ನೀನು ಏನನ್ನಾದರೂ ದೃಶ್ಯವನ್ನು ನೋಡುವಾಗ ಕೇವಲ ನೋಡುವುದರಲ್ಲಿ ಅರಿವಿರಲಿ; ಹಾಗೆಯೇ ಕೇಳುವಾಗ ಕೇವಲ ಶಬ್ದದ ಬಗ್ಗೆ ಮಾತ್ರ ಅರಿವಿರಲಿ; ಹಾಗೆಯೇ ಆಘ್ರಾಣಿಸುವಾಗ ಕೇವಲ ವಾಸನೆಯ ಬಗ್ಗೆ ಮಾತ್ರ ಅರಿವಿರಲಿ; ಹಾಗೆಯೇ ರುಚಿ ಸ್ವಾದಿಸುವಾಗ ಕೇವಲ ರುಚಿಯ ಬಗ್ಗೆ ಮಾತ್ರ ಅರಿವಿರಲಿಹಾಗೆಯೇ ಸ್ಪಶರ್ಿಸುವಾಗ ಕೇವಲ ಸ್ಪರ್ಶದ ಬಗ್ಗೆ ಮಾತ್ರ ಅರಿವಿರಲಿ; ಹಾಗೆಯೇ ಯೋಚಿಸುತ್ತಿರುವಾಗ ಕೇವಲ ಯೋಚನಾ ವಸ್ತುವಿನ ಬಗ್ಗೆ ಮಾತ್ರ ಅರಿವಿರಲಿ;

                ಬಾಹಿಯನು ಆ ಕ್ಷಣದಿಂದಲೇ ಅದನ್ನು ಸಾಧಿಸಿದನು. ಆತನ ಹಿಂದಿನ ಜನ್ಮಗಳ ಮತ್ತು ಈ ಜನ್ಮದ ಪುಣ್ಯಸಂಗ್ರಹದ ಪರಿಣಾಮವಾಗಿ ಆತನು ರಸ್ತೆಯಲ್ಲಿಯೇ ಅರಹಂತನಾದನು. ಆತನು ಬುದ್ಧರಲ್ಲಿ ಸಂಘವನ್ನು ಸೇರಲು ಅಪ್ಪಣೆ ಕೇಳಿದನು. ಬುದ್ಧರು ಆತನಿಗೆ ಭಿಕ್ಷುವಿನ ಪರಿಕರಗಳಾದ ಚೀವರ, ಪಿಂಡಪಾತ್ರೆ ಇತ್ಯಾದಿಗಳನ್ನು ಸಂಗ್ರಹಿಸಲು ಹೇಳಿದರು. ಆತನು ಅವುಗಳನ್ನು ಸಂಗ್ರಹಿಸಲು ಹೋಗುತ್ತಿರುವಾಗ, ಸ್ತ್ರೀ ಪ್ರೇತದ ಆವಾಹನೆಯಾಗಿರುವ ಹಸುವೊಂದು ಬಾಹಿಯನಿಗೆ ಕೊಂಬಿನಿಂದ ತಿವಿದು ಕೊಂದಿತು. ಬುದ್ಧರು ಮತ್ತು ಭಿಕ್ಷು ಸಮೂಹವು ಆಹಾರ ಮುಗಿಸಿ ಹಿಂತಿರುಗುವಾಗ ಬಾಹಿಯನ ಶವವನ್ನು ಕಂಡರು. ಆಗ ಭಗವಾನರು ಬಾಹಿಯನು ಅರಹಂತನಾಗಿರು ವವನೆಂದು ಮಾರ್ಗ ಅಭಿಜ್ಞಾದಲ್ಲಿ ಬಾಹಿಯನು ಅತ್ಯಂತ ವೇಗಶಾಲಿಯು ಹಾಗು ಅಗ್ರನೆಂದು ಆತನ ಬಗ್ಗೆ ಹೇಳಿದರು. ಆದರೆ ಭಿಕ್ಷುಗಳು ಕೇವಲ ಗಾಥೆಯೊಂದರಲ್ಲಿ ಅರಹಂತರಾಗಲು ಸಾಧ್ಯವೇ? ಎಂದು ಆಶ್ಚರ್ಯಪಟ್ಟಾಗ ಭಗವಾನರು ಈ ಮೇಲಿನ ಗಾಥೆಯನ್ನು ಹೇಳಿದರು. ನಂತರ ಬಾಹಿಯನಿಗೆ ಸ್ತೂಪ ಕಟ್ಟಿಸಲಾಯಿತು.

No comments:

Post a Comment