Thursday 23 April 2015

dhammapada/papavagga/9.9/koka

ನಿರಪರಾಧಿಗೆ ಹಿಂಸಿಸುವವನು ಶೋಕ ತಾಳುತ್ತಾನೆ
ಹೇಗೆ ಎದುರು ಗಾಳಿಗೆ ಎಸೆದ ಕಸದ ಧೂಳು ತಿರುಗಿ ಬೀಳುವುದೋ ಹಾಗೆಯೇ ನಿರಪರಾಧಿಯಾದ, ಪರಿಶುದ್ಧನಾದ ಮತ್ತು ಕುಂದಿಲ್ಲದವನ ಮೇಲೆ ಮೂರ್ಖನು ಎಸಗಿದ ಪಾಪವು ಅವನ ಮೇಲೆಯೇ ಎರಗಿಬೀಳುತ್ತದೆ.    (125)
ಗಾಥ ಪ್ರಸಂಗ 9:9
ಕೋಕ ಬೇಟೆಗಾರನ ಮೂರ್ಖತ್ವಕ್ಕೆ ಫಲಿತಾಂಶ
          ಒಂದುದಿನ ಕೋಕ ಎಂಬ ಬೇಟೆಗಾರನು ತನ್ನ ಬೇಟೆ ನಾಯಿಗಳೊಂದಿಗೆ ಕಾಡಿನೊಳಕ್ಕೆ ಹೊರಟನು. ಅದೇ ಸಮಯದಲ್ಲಿ ಭಿಕ್ಖುವೊಬ್ಬನು ನಗರಕ್ಕೆ ಪ್ರವೇಶಿಸುತ್ತಿದ್ದನು. ಆಗ ಬೇಟೆಗಾರನ ಮನಸ್ಸಿನಲ್ಲಿ ಕೋಪ ಮೂಡಿತು. ಏಕೆಂದರೆ ಆತನು ಭಿಕ್ಖುಗಳಿಗೆ ಕಂಡರೆ ಅಪಶಕುನ ಎಂದು ಭಾವಿಸುತ್ತಿದ್ದನು. ಆಗ ಆತನು ಹೀಗೆ ಯೋಚಿಸಿದನು: ಓ, ನಾನು ಈತನನ್ನು ನೋಡಿಬಿಟ್ಟೆನಲ್ಲಾ, ಇಂದು ನನಗೆ ಏನೂ ಸಹಾ ದೊರೆಯುವಂತಿಲ್ಲ. ಹೀಗೆ ಯೋಚಿಸುತ್ತ ಆತನು ಮುನ್ನಡೆದನು. ಆತನಿಗೆ ಅಂದು ಏನೂ ದೊರೆಯಲಿಲ್ಲ. ಆತನು ನಿರಾಶನಾಗಿ ಮನೆಯಡೆಗೆ ಹಿಂತಿರುಗುತ್ತಿದ್ದನು, ಅದೇ ಸಮಯದಲ್ಲಿ ಅದೇ ಭಿಕ್ಖುವು ಸಹಾ ವಿಹಾರಕ್ಕೆ ಹಿಂತಿರುಗುತ್ತದ್ದನು. ಆಗ ಆ ಬೇಟೆಗಾರನಿಗೆ ಅತಿ ಕೋಪವುಂಟಾಯಿತು. ಈತನಿಂದಲೇ ಹೀಗಾಯಿತು ಎಂದು ಭಾವಿಸಿ, ಆತನು ಬೇಟೆ ನಾಯಿಗಳಿಗೆ ಛೂಬಿಟ್ಟನು. ಆ ಭಿಕ್ಷುವು ಗಾಬರಿಗೊಂಡು ಹತ್ತಿರದಲ್ಲಿದ್ದ ಮರವನ್ನು ಏರಿಬಿಟ್ಟನು. ಹಾಗೆ ಏರುತ್ತಾ ಆತನು ಬೇಟೆ ನಾಯಿಗಳಿಗೆ ಸಿಗದಷ್ಟು ಎತ್ತರ ಏರಿದನು. ಆಗ ಬೇಟೆಗಾರನು ವ್ಯಘ್ರನಾಗಿ ಮರದ ಬುಡದಲ್ಲಿ ನಿಂತು, ತನ್ನ ಬಾಣದಿಂದ ಭಿಕ್ಖುವಿನ ಪಾದಕ್ಕೆ ಚುಚ್ಚಲಾರಂಭಿಸಿದನು. ಆಗ ಆ ಭಿಕ್ಖುವಿಗೆ ಅತೀವ ನೋವಾಗಿ ತನ್ನ ಚೀವರವನ್ನು ಹಿಡಿದುಕೊಳ್ಳಲು ಅಸಮರ್ಥರಾಗಿ, ಆ ಚೀವರವು ಜಾರಿ ಕೆಳಗಿದ್ದ ಆ ಬೇಟೆಗಾರನ ಮೇಲೆ ಬಿದ್ದಿತು.

          ಆ ನಾಯಿಗಳು ಕಾಷಾಯ ಚೀವರವು ಮೇಲಿಂದ ಬಿದ್ದುದನ್ನು ಕಂಡವು. ಅವು ತಪ್ಪಾಗಿ ಗ್ರಹಿಸಿ ಅದನ್ನು ಭಿಕ್ಷುವೆಂದು ಭಾವಿಸಿ, ಕಾಷಾಯ ವಸ್ತ್ರದಲ್ಲಿ ಸಿಲುಕಿದ ಬೇಟೆಗಾರನನ್ನೇ ಕಚ್ಚಿ ಕಚ್ಚಿ ಎಳೆದಾಡಿದವು. ಆಗ ಭಿಕ್ಖುವು ಮೇಲಿನಿಂದ ಮರದ ರೆಂಬೆಗಳನ್ನು ಮುರಿದು ನಾಯಿಗಳತ್ತ ಎಸೆದನು. ಆಗ ಆ ನಾಯಿಗಳಿಗೆ ತಾವು ಕಚ್ಚಿದ್ದು ತಮ್ಮ ಒಡೆಯನಿಗೆ ಎಂದು ಅರಿವಾಗಿ ಭಯಪಟ್ಟು ಕಾಡಿನೊಳಕ್ಕೆ ಓಡಿಹೋದವು. ಆಗ ಆ ಭಿಕ್ಷುವು ಮೇಲಿನಿಂದ ನಿಧಾನವಾಗಿ ಕೆಳಗೆ ಇಳಿದನು. ಆದರೆ ಆ ಬೇಟೆಗಾರನು ಸತ್ತುಹೋಗಿದ್ದನು. ಆ ಭಿಕ್ಖುವು ಆತನಿಗಾಗಿ ವಿಷಾಧಪಡುತ್ತ, ಆತನ ಸಾವಿಗೆ ತಾನು ಹೊಣೆಗಾರನಾಗಿರಬಹುದೇ ಎಂದು ಸಂಶಯಿಸಿ ಭಗವಾನರ ಬಳಿಗೆ ಬಂದು ಪೂರ್ಣವಾಗಿ ವಿವರವನ್ನೆಲ್ಲಾ ನುಡಿದನು. ಆಗ ಭಗವಾನರು ಹೀಗೆ ನುಡಿದರು: ಓ ಮಗು, ಭರವಸೆ ತಾಳುವಂತಾಗು, ಸಂಶಯದಿಂದ ಕೂಡಬೇಡ, ಆತನ ಸಾವಿಗೆ ನೀನು ಹೊಣೆಗಾರನಲ್ಲ, ಆತನ ಸಾವಿನಿಂದ ನಿನ್ನ ಶೀಲವು ಭಂಗವಾಗಲಿಲ್ಲ. ಬದಲಾಗಿ ನಿರಪರಾಧಿಗೆ ಕೇಡನ್ನುಂಟು ಮಾಡಲು ಹೋಗಿ ಬೇಟೆಗಾರನೇ ದೋಷಿಯಾಗಿದ್ದಾನೆ. ಆದ್ದರಿಂದಾಗಿ ಆತನು ದುಃಖಭರಿತ ಅಂತ್ಯವನ್ನು ಹೊಂದಿದ್ದಾನೆ ಎಂದು ಹೇಳಿ ಈ ಮೇಲಿನ ಗಾಥೆಯನ್ನು ನುಡಿದರು.

No comments:

Post a Comment