Friday 17 April 2015

dhammapada/papavagga/9.6/bilalapadaka

ಪಾಪವನ್ನು ಅಲ್ಪವೆಂದು ಭಾವಿಸಬೇಡಿ
ಪುಣ್ಯವನ್ನು ಕುರಿತು ಹಗುರವಾಗಿ ಎಣಿಸಬೇಡಿ, ನನಗೆ ಸಿಗುವುದಿಲ್ಲ ಎಂದು ಯೋಚಿಸಬೇಡಿ. ಹೇಗೆ ಮಡಿಕೆಯು ಹನಿ ಹನಿ ನೀರಿನಿಂದ ತುಂಬುವುದೋ ಹಾಗೆಯೇ ಜ್ಞಾನಿಯು ಸಹಾ ಸ್ವಲ್ಪ ಸ್ವಲ್ಪವಾಗಿಯೇ ಪುಣ್ಯವನ್ನು ಸಂಗ್ರಹಿಸುತ್ತಾನೆ. (122)
ಗಾಥ ಪ್ರಸಂಗ 9:6
ಬಿಲಾಲಪದಾಕನ ದಾನ ಪ್ರಸಂಗ

                ಒಮ್ಮೆ ಶ್ರಾವಸ್ತಿಯ ವ್ಯಕ್ತಿಯೊಬ್ಬನು ಭಗವಾನರ ಬೋಧನೆಯನ್ನು ಆಲಿಸಿ ಅಪಾರವಾಗಿ ಉತ್ತೇಜಿತನಾದನು. ಆತನು ಭಗವಾನರಿಗೆ ಮತ್ತು ಭಿಕ್ಷು ಸಂಘಕ್ಕೆ ದಾನ ನೀಡಲು ನಿರ್ಧರಿಸಿದನು. ಆದರೆ ಈ ದಾನ ಕಾರ್ಯದಲ್ಲಿ ಪರರು ಸಹಾಯ ಮಾಡಿದರೆ ಅವರೆಲ್ಲರಿಗೂ ಸಹಾ ಪುಣ್ಯದಲ್ಲಿ ಫಲ ಸಿಗುವುದೆಂದು ಯೋಚಿಸಿ, ಆತನು ಜೇತವನದಲ್ಲಿದ್ದ ಬುದ್ಧರಿಗೆ ಮತ್ತು ಸಂಘಕ್ಕೆ ಮಾರನೆಯದಿನ ಊಟಕ್ಕೆ ಆಹ್ವಾನಿಸಿದನು. ನಂತರ ಆತನು ತಾನು ವಾಸವಾಗಿದ್ದ ಸುತ್ತಮುತ್ತಲಿನ ಎಲ್ಲಾ ಮನೆಯವರಿಂದ ದಾನಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿದನು. ಅವರಿಗೆಲ್ಲಾ ದಾನದ ಮಹತ್ವತೆ ಸಾರಿದನು. ಅವರೆಲ್ಲರೂ ಸಹಾ ಆಹಾರಕ್ಕೆ ಬೇಕಾಗುವ ಸಾಮಗ್ರಿಗಳನ್ನು ತಮ್ಮ ಕೈಲಾದಷ್ಟು ನೀಡುತ್ತಿದ್ದರು. ಅದೇ ಬೀದಿಯಲ್ಲಿ ಒಬ್ಬ ಜಿಪುಣ ಶ್ರೀಮಂತನಿದ್ದನು. ಆತನೇ ಬಿಲಾಲಪದಾಕ. ಈ ಬಿಲಾಲಪದಾಕನಿಗೆ ಈ ದಾನಿಯ ನಡವಳಿಕೆ ಇಷ್ಟವಾಗಲಿಲ್ಲ. ಆ ದಾನಿಯ ಬಗ್ಗೆ ಹೀಗೆ ಗೊಣಗಿಕೊಂಡನು. ಈ ನೀಚ ಮನುಷ್ಯನು ದಾನವನ್ನು ಮಾಡುವುದಾದರೆ ತಾನೇ ಮಾಡಬೇಕು, ಏತಕ್ಕಾಗಿ ಹೀಗೆ ಎಲ್ಲರಿಗೂ ದಾನ ನೀಡುವಂತೆ ಈತನು ಪೀಡಿಸುತ್ತಿರುವನು ಎಂದು. ಆದರೂ ಆ ಬಿಲಾಲಪದಾಕನು ಅತಿಸ್ವಲ್ಪ ಅಕ್ಕಿ, ಅತ್ಯಲ್ಪ ಬೆಣ್ಣೆ ಮತ್ತು ಸ್ವಲ್ಪ ಬೆಲ್ಲವನ್ನು ದಾನ ನೀಡಿದನು. ಅವನು ಅದನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಹೋದನು, ಅದರಲ್ಲಿ ಸೇರಿಸಲಿಲ್ಲ. ಆಗ ಆ ಶ್ರೀಮಂತನಿಗೆ ತನ್ನನ್ನು ಅವಮಾನಗೊಳಿಸುವುದಕ್ಕಾಗಿಯೇ ಪ್ರತ್ಯೇಕವಾಗಿ ತೆಗೆದುಕೊಂಡು ಹೋಗುತ್ತಿರುವನು ಎಂದು ಸಂಶಯಿಸಿದನು. ಇದನ್ನು ಅರಿಯುವುದಕ್ಕಾಗಿ ಆತನು ತನ್ನ ಸೇವಕನನ್ನು ಹಿಂಬಾಲಿಸಲು ಕಳುಹಿಸಿದನು.
                ಆ ದಾನಿಯು ಶ್ರೀಮಂತನಿಗೂ ಮಹಾ ಲಾಭ ದೊರೆಯುವಂತಾಗಲು ಆ ಅಕ್ಕಿ, ಬೆಲ್ಲ ಮತ್ತು ಬೆಣ್ಣೆಯನ್ನು ವಿವಿಧ ಪಾತ್ರೆಗಳಲ್ಲಿ ಸ್ವಲ್ಪ ಸ್ವಲ್ಪ ಸುರಿದನು. ಇದನ್ನು ಕಂಡ ಸೇವಕನು ಬಿಲಾಲಪದಾಕನಿಗೆ ವಿಷಯ ತಿಳಿಸಿದನು. ಇದನ್ನು ಅರ್ಥಮಾಡಿಕೊಳ್ಳಲಾಗದ ಆ ಶ್ರೀಮಂತನು ಆ ದಾನಿಯ ಬಗ್ಗೆ ಸಂಶಯ ಪಟ್ಟು ಇಂದು ಆ ದಾನಿಯು ನಾನು ನೀಡಿರುವುದು ಅತಿ ಅಲ್ಪವೆಂದು ಅಪಮಾನಗೊಳಿಸಿದರೆ ನಾನು ಈ ಚೂರಿಯಿಂದ ಆತನ ಹತ್ಯೆಗೈಯ್ಯುವೆನು ಎಂದು ನಿರ್ಧರಿಸಿದ್ದನು.
                ಆದರೆ ಆ ದಾನಿಯು ಭಗವಾನರೊಂದಿಗೆ ಹೀಗೆ ಹೇಳಿದನು: ಭಗವಾನ್ ಈ ದಾನವು ಎಲ್ಲರಿಂದಲೂ ಕೂಡಿ ಸಮಪರ್ಿಸಲ್ಪಟ್ಟಿದೆ. ಅದು ಅಲ್ಪವಾಗಿರಲಿ ಅಥವಾ ಅಧಿಕವಾಗಿರಲಿ, ಪ್ರತಿಯೊಂದು ಶ್ರದ್ಧೆಯಿಂದ ದಾನ ಮಾಡಿದ್ದಾರೆ. ಹೀಗಾಗಿ ಎಲ್ಲರಿಗೂ ಸಮಾನದ ಪುಣ್ಯ ಸಿಗುವಂತಾಗಲಿ ಎಂದು ಕೋರಿಕೊಂಡನು. ಭಗವಾನರು ಒಪ್ಪಿಗೆ ಸೂಚಿಸಿದರು. ಆ ದಾನಿಯಿಂದ ಈ ಮಾತುಗಳನ್ನು ಕೇಳಿದ ನಂತರ ಆ ಶ್ರೀಮಂತನಿಗೆ ಪಶ್ಚಾತ್ತಾಪ ಉಂಟಾಯಿತು. ಆತನು ದಾನಿಯಿಂದ ಹೀಗೆ ಕ್ಷಮೆಯಾಚಿಸಿದನು: ಮಿತ್ರನೇ, ನಿನ್ನ ಬಗ್ಗೆ ಕೆಟ್ಟದಾಗಿ ಚಿಂತಿಸಿ ತಪ್ಪು ಮಾಡಿದ್ದೇನೆ, ಪಾಪ ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು.

                ದಾನಿಗೆ ವಿಷಯ ಅರ್ಥವಾಗದೆ ಗಲಿಬಿಲಿಗೊಂಡನು. ವಿಷಯ ತಿಳಿದನಂತರ ಆತನು ಕ್ಷಮಿಸಿದನು. ಆಗ ಭಗವಾನರು ಆ ಶ್ರೀಮಂತನಿಗೆ ಹೀಗೆ ಹೇಳಿದರು: ಓ ಶಿಷ್ಯನೇ, ಪುಣ್ಯವನ್ನು ಅಥವಾ ದಾನವನ್ನು ಎಂದಿಗೂ ಅಲ್ಪವೆಂದೆಣಿಸಬೇಡ, ಅದು ಎಷ್ಟೇ ಚಿಕ್ಕದಿರಲಿ, ನಿರಂತರವಿದ್ದರೆ ಅದು ದೊಡ್ಡದಾಗುವುದು ಎಂದು ಸಮಾಧಾನಿಸಿದರು. ನಂತರ ಈ ಗಾಥೆ ನುಡಿದರು.

No comments:

Post a Comment