Friday 17 April 2015

dhammapada/papavagga/9.3/lajadevi

ಮತ್ತೆ ಮತ್ತೆ ಪುಣ್ಯ ಆಚರಿಸು
ಪುರುಷನು (ವ್ಯಕ್ತಿಯು) ಪುಣ್ಯವನ್ನು ಆಚರಿಸಬಹುದು, ಆತನು ಪುಣ್ಯವನ್ನು ಪುನಃ ಪುನಃ ಪುನರಾವತರ್ಿಸಲಿ, ಅಂತಹ ಪುಣ್ಯಾಚರಣೆಯಲ್ಲೇ ಆನಂದಿಸಲಿ, ಪುಣ್ಯದ ಸಂಚಯ ಸುಖಕಾರಿಯಾಗಿದೆ.          (118)
ಗಾಥ ಪ್ರಸಂಗ 9:3
ಲಾಜಾ ದೇವಿಯ ದಾನ ಪರಿಣಾಮ

                ಪೂಜ್ಯ ಮಹಾಕಸ್ಸಪರವರು ಒಮ್ಮೆ ಏಳು ದಿನಗಳ ಕಾಲ ಪಿಪ್ಪಲಿ ಗುಹೆಯಲ್ಲಿ ನಿರೋಧ ಸಮಾಪತ್ತಿಯಲ್ಲಿ ಮಗ್ನರಾಗಿದ್ದರು. ನಂತರ ಸಮಾಧಿಯಿಂದ ಎದ್ದು ಯಾವ ಶ್ರದ್ಧಾವಂತರಿಗೆ ದಾನಕ್ಕೆ ಅವಕಾಶ ನೀಡಬೇಕೆಂದು, ದಿವ್ಯ ದೃಷ್ಟಿಯಿಂದ ವೀಕ್ಷಿಸಿದಾಗ, ಆಗ ಹೊಲದಲ್ಲಿದ್ದ ಸ್ತ್ರೀಯೊಬ್ಬಳು ಗೋಚರಿಸಿದಳು. ಆಕೆಯ ಶ್ರದ್ಧೆಯು ಅರಿವಾಯಿತು. ಆಕೆಗೆ ದಾನದ ಅವಕಾಶ ನೀಡಬೇಕೆಂದು ಚೀವರ ಧರಿಸಿ, ಪಿಂಡಪಾತ್ರೆ ತೆಗೆದುಕೊಂಡು ಭತ್ತದ ಹೊಲದಕಡೆಗೆ ನಡೆದರು.
                ದೂರದಿಂದ ಭಂತೆ ಮಹಾಕಸ್ಸಪರವರು ಬರುತ್ತಿದ್ದಂತೆಯೇ ಆ ಸ್ತ್ರೀಯಲ್ಲಿ ಆನಂದವು ಉಕ್ಕಿಹರಿದು ಒಂದು ನಿಮಿಷ ಪೂಜ್ಯರೇ ಎಂದು ಒಳಹೊರಟು ಅನ್ನ ಇತ್ಯಾದಿ ಭೋಜ್ಯಗಳನ್ನು ಪೂಜ್ಯ ಮಹಾಕಸ್ಸಪರವರ ಪಿಂಡಪಾತ್ರೆಗೆ ಸುರಿದಳು. ನಂತರ ಭಕ್ತಿಯಿಂದ ಸಾಷ್ಟಾಂಗ ನಮಸ್ಕರಿಸಿದಳು. ನಂತರ ತನ್ನ ಕೋರಿಕೆಯನ್ನು ಹೀಗೆ ಸ್ಪಷ್ಟಪಡಿಸಿದಳು. ಪೂಜ್ಯರೇ, ನಾನು ಸಹಾ ನೀವು ಗಳಿಸಿದ ಸತ್ಯ ಸಾಕ್ಷಾತ್ಕಾರಗಳಲ್ಲಿ ಭಾಗಿಯಾಗಬಹುದೇ?
                ತಥಾಸ್ತು ಎಂದು ಪೂಜ್ಯರು ಅನುಮೋದನೆ ಮಾಡಿ ಅಲ್ಲಿಂದ ನಡೆದರು. ಅವರು ಅಲ್ಲಿಂದ ತೆರಳಿದ ಮೇಲೆ, ಆ ಶ್ರದ್ಧಾವಂತರಿಗೆ ತನ್ನ ದಾನದ ಬಗ್ಗೆ ಅತೀವ ಆನಂದವಾಯಿತು. ದಾನದ ಘಟನೆಯನ್ನೇ ಪುನಃ ಪುನಃ ಸ್ಮರಿಸುತ್ತ, ಆನಂದಿಸುತ್ತ, ನಡೆಯುತ್ತಿರುವಾಗ, ದುಷ್ಟ ಸರ್ಪವೊಂದು ಆಕೆಯ ಕಾಲಿಗೆ ಕಚ್ಚಿತು, ಪರಿಣಾಮವಾಗಿ ಕುಸಿದುಬಿದ್ದಳು, ಆಕೆಯು ಸಾವಿಗೆ ಸಮೀಪಿಸುತ್ತಿದ್ದರೂ ಸಹಾ ದಾನಾನುಸ್ಮೃತಿಯಲ್ಲೇ ಆನಂದಭರಿತಳಾಗಿದ್ದಳು. ಆಕೆಯು ಸತ್ತುಹೋದಳು. ಮರುಕ್ಷಣದಲ್ಲೇ ಆಕೆಯು ಸುಗತಿಯಲ್ಲಿ ಪುನರ್ಜನ್ಮಿಸಿದಳು.
                ದೇವತೆಯಾದ ಆಕೆಗೆ ತನ್ನ ಈ ಸ್ಥಿತಿಗೆ ಕಾರಣ, ಪೂಜ್ಯರಿಗೆ ನೀಡಿದ ದಾನವೇ ಎಂದು ಸ್ಪಷ್ಟವಾಗಿ ತಿಳಿದುಹೋಗಿತ್ತು. ಆದ್ದರಿಂದ ಆಕೆಯು ದಾನದಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ನಿರ್ಧರಿಸಿದಳು. ಹೀಗಾಗಿ ಆಕೆಯು ಪೂಜ್ಯ ಮಹಾಕಸ್ಸಪರವರ ಸ್ಥಳಕ್ಕೆ ಬಂದು ಕಾಲಕಾಲಕ್ಕೆ ಶುಭಗೊಳಿಸಿ, ನೀರು ತುಂಬಿ ಈ ವಿಧವಾದ ನಾನಾ ಕಾರ್ಯಗಳನ್ನು ಮಾಡತೊಡಗಿದಳು. ಮೊದಲಿಗೆ ಭಂತೆ ಕಸ್ಸಪರವರಿಗೆ ಈ ವಿಷಯ ತಿಳಿದಿರಲಿಲ್ಲ. ಅವರು ಕಿರಿಯ ಸಾಮಣೇರರು ಇವೆಲ್ಲಾ ಮಾಡಿರಬಹುದೆಂದು ತಿಳಿದುಕೊಳ್ಳುತ್ತಿದ್ದರು. ಮೂರನೆಯ ದಿನ ಅವರು ಗುಡಿಸುವ ಶಬ್ದವನ್ನು ಆಲಿಸಿದರು. ಬಾಗಿಲ ಸಂಧಿಯಿಂದ ವೀಕ್ಷಿಸಿದಾಗ ಅತ್ಯಂತ ಪ್ರಭೆಯಿಂದ ಕೂಡಿರುವ ದೇವತಾಕೃತಿಯು ಗುಡಿಸುತ್ತಿರುವುದು ಕಂಡುಬಂದಿತು. ಯಾರದು? ಎಂದು ಕಸ್ಸಪರವರು ಕೇಳಿದಾಗ, ತಾನು ಲಾಜಾದೇವಿಯೆಂದು ತನ್ನ ಪೂರ್ಣ ವಿವರವನ್ನೆಲ್ಲಾ ತಿಳಿಸಿದಳು. ಓ ದೇವತೆಯೇ, ಇನ್ನುಮುಂದೆ ಹೀಗೆ ಮತ್ತೆ ಬರಬೇಡ ಎಂದು ಮಹಾಕಸ್ಸಪರವರು ಆಜ್ಞೆ ಮಾಡಿದರು.
                ಅದನ್ನು ಆಲಿಸಿದ ಲಾಜಾದೇವಿಯು ದುಃಖಿತಳಾದಳು. ತನ್ನನ್ನು ಪುಣ್ಯದಿಂದ ವಂಚಿತರನ್ನಾಗಿಸಬೇಡಿರೆಂದು ಕೇಳಿಕೊಂಡಳು. ಆದರೂ ಶಿಸ್ತುಬದ್ಧರಾಗಿದ್ದ ಮಹಾಕಸ್ಸಪರವರು ಅನುಮತಿ ನೀಡಲಿಲ್ಲ. ನನ್ನನ್ನು ಪುಣ್ಯದ ಐಶ್ವರ್ಯದಿಂದ ವಂಚಿತರನ್ನಾಗಿಸಿದಿರಲ್ಲ ಎಂದು ಗೋಳಾಡಿದಾಗ, ಭಗವಾನರಿಗೆ ಆಕೆಯ ರೋಧನ ದೂರದಲ್ಲಿದ್ದರೂ ಕೇಳಿಸಿತು. ಅವರು ಆ ಕ್ಷಣದಲ್ಲೇ ಪ್ರತ್ಯಕ್ಷರಾದರು. ಆಕೆಗೆ ಉತ್ತಮ ಭವಿಷ್ಯ ಕಾದಿದೆ ಎಂದು ಸಮಾಧಾನಪಡಿಸಿದರು. ಹಾಗು ಪುಣ್ಯ ಅತ್ಯುನ್ನತವಾದರೂ, ಅದಕ್ಕಾಗಿ ಕುಮಾರಿಯಾದ ಆಕೆಯು ಏಕಾಂಗಿಯಾಗಿ ವಿಹಾರದ ಚಟುವಟಿಕೆಗಳಲ್ಲಿ ಭಾಗವಹಿಸುವುದು ಸರಿಯಲ್ಲ ಎಂದು ಅರಿವು ಮೂಡಿಸಿದರು.

                ಆಕೆಯ ಸಂಬಂಧವಾಗಿಯೇ ಭಿಕ್ಷುಗಳಿಗೆ ಈ ಗಾಥೆಯನ್ನು ನುಡಿದಿದ್ದರು.

No comments:

Post a Comment