Wednesday 1 April 2015

dhammapada/sahassavagga/8.3/bhikkhunikundalakesi

ತನ್ನನ್ನು ಗೆಲ್ಲುವವನೇ ಪರಮಶ್ರೇಷ್ಠ ಜಯಶಾಲಿ
ಅನರ್ಥ ಪದ ಸಂಹಿತಗಳಿಂದ ಕೂಡಿರುವ ನೂರು ಗಾಥೆಗಳಿಗಿಂತ ಕೇಳಿದಾಗ ಪರಮಶಾಂತಿ ತರುವ ಏಕ ಧಮ್ಮಭರಿತ ಪದವೇ ಶ್ರೇಷ್ಠಕರವಾದುದು.            (102)
ಒಬ್ಬನು ಸಾವಿರ ಸಂಗ್ರಾಮಗಳಲ್ಲಿ ಸಹಸ್ರ ಸಹಸ್ರ ಮನುಷ್ಯರನ್ನು ಜಯಿಸಬಹುದು, ಆದರೂ ಸಹ ಕೇವಲ ತನ್ನನ್ನು ಜಯಿಸಿದಂತಹವನು ಅತ್ಯುತ್ತಮ ಜಯಶಾಲಿಯಾಗಿರುತ್ತಾನೆ.   (103)
ಗಾಥ ಪ್ರಸಂಗ 8:3
ಭಿಕ್ಷುಣಿ ಕುಂಡಲಿಕೇಸಿಯ ಕಥೆ

                ರಾಜಗೃಹದ ಶ್ರೀಮಂತ ವರ್ತಕನಿಗೆ 16 ವರ್ಷದ ಮಗಳಿದ್ದಳು. ಆಕೆಯು 7ನೇ ಅಂತಸ್ತಿನ ಅರಮನೆಯಂತಹ ಮಹಡಿಯಲ್ಲಿ ವಾಸಿಸುತ್ತಿದ್ದಳು. ಆಕೆಗೆ ಒಬ್ಬ ದಾಸಿಯು ಇದ್ದಳು. ಒಮ್ಮೆ ಕಳ್ಳನೊಬ್ಬನು ಸಿಕ್ಕಿಬಿದ್ದು, ಆತನ ಕೈಗಳನ್ನು ಕುತ್ತಿಗೆಯ ಹಿಂಬದಿಗೆ ಕಟ್ಟಿ, ಮರಣದಂಡನೆ ವಿಧಿಸಲು ಕರೆದೊಯ್ಯುತ್ತಿದ್ದರು. ಅದರಿಂದಾಗಿ ರಸ್ತೆಗಳಲ್ಲಿ ಗುಂಪು ತುಂಬಿತ್ತು. ವರ್ತಕನ ಮಗಳು ಕುತೂಹಲದಿಂದಾಗಿ ಈ ದೃಶ್ಯವನ್ನು ಮೇಲಿನಿಂದ ಆ ಕಳ್ಳನನ್ನು ನೋಡಿದಳು. ಪೂರ್ವ ಜನ್ಮದ ಸಂಬಂಧದಿಂದಾಗಿ ಹಾಗು ಆತನ ಸುಂದರತೆಯಿಂದಾಗಿ ಆಕೆ ಆತನಿಂದ ಆಕಷರ್ಿತಳಾದಳು. ಆತನನ್ನು ಬಯಸುತ್ತ ಆಕೆ ಊಟವನ್ನೇ ನಿರಾಕರಿಸಿದಳು. ತಂದೆ-ತಾಯಿಗಳು ಕಾರಣ ಕೇಳಿದಾಗ, ಆಕೆಯು ಕಳ್ಳನನ್ನೇ ಪತಿಯಾಗಿ ಬಯಸುವೆ ಎಂದಳು. ಆಕೆಯ ಹಠದಿಂದಾಗಿ ತಂದೆ-ತಾಯಿಗಳು ಮಣಿದು, ಮರಣದಂಡನೆ ವಿಧಿಸುವ ಅಧಿಕಾರಿಗೆ ಲಂಚನೀಡಿ, ಆತನನ್ನು ಬಿಡಿಸಿಕೊಂಡು ಮಗಳಿಗೆ ಮದುವೆ ಮಾಡಿದರು.
                ಆಕೆಯು ಪತಿಗೆ ಚೆನ್ನಾಗಿ ಸಲಹುತ್ತಿದ್ದಳು, ಪ್ರೀತಿಯಿಂದ ಯಾವ ಕೊರತೆ ಬಾರದಂತೆ ನೋಡಿಕೊಳ್ಳುತ್ತಿದ್ದಳು. ಆದರೆ ಆತನು ದುಷ್ಟನಾಗಿದ್ದನು, ವಂಚಕತನದಿಂದ ಕೂಡಿದ್ದನು. ಆತನು ಹೀಗೆ ಯೋಚಿಸುತ್ತಿದ್ದನು: ಯಾವಾಗ ಈ ಹೆಣ್ಣನ್ನು ಕೊಂದು, ಆಕೆಯ ಆಭರಣಗಳನ್ನು ತೆಗೆದುಕೊಂಡು ಹೋಗುವೆನೊ? ಎಂದು ಯೋಚಿಸುತ್ತಿದ್ದನು. ಒಂದುದಿನ ಆತನು ಆಹಾರ, ನಿದ್ದೆ ನಿರಾಕರಿಸಿದನು. ಆಕೆ ಕಾರಣವನ್ನು ಕೇಳಿದಾಗ, ಆತನು ಹೀಗೆ ಹೇಳಿದನು: ನನ್ನ ಜೀವ ಉಳಿದರೆ ಕಳ್ಳರ ಬೆಟ್ಟದ ದೇವತೆಗೆ ಹರಕೆ ತೀರಿಸುವೆ ಎಂದು ಹರಕೆ ಮಾಡಿರುವೆ. ಹಾಗೆಯೇ ನಿನ್ನಿಂದ ಜೀವ ಉಳಿಯಿತು. ನಾನು ಆ ಬೆಟ್ಟಕ್ಕೆ ಹೋಗಬೇಕಾಗಿದೆ. ಆಕೆ ಹರಕೆ ತೀರಿಸಲು ಏನೇನು ಬೇಕಾಗಿದೆ ಎಂದು ಕೇಳಿದಾಗ, ಆತನು ಅಕ್ಕಿಯ ಪಾಯಸ, ಜೇನು, ಲಾಜಾ ಸಹಿತ ಐದುಬಗೆಯ ಹೂಗಳನ್ನು ಹೇಳಿದನು. ಜೊತೆಗೆ ಆಭರಣ, ವಸ್ತ್ರಗಳ ಸಹಿತ ಹೋಗಿ ಆನಂದಮಯವಾಗಿ ಸುತ್ತಾಡೋಣ ಎಂದನು. ಅದರಂತೆ ಆಕೆಯು ಸಿದ್ಧಳಾಗಿ, ಬೆಟ್ದ ತುದಿಗೆ ಬಂದಾಗ, ಆತನು ಆಕೆಯನ್ನು ಕೊಂದು ಆಭರಣ ತೆಗೆದುಕೊಳ್ಳಲು ಬಂದಿರುವೆ ಎಂದು ನಿಜ ಕಾರಣವನ್ನು ಹೇಳಿದನು. ಆಗ ಆಕೆಯು ಆಭರಣ ತೆಗೆದುಕೊಂಡು ತನ್ನ ಪ್ರಾಣ ಉಳಿಸಲು ಬೇಡಿಕೊಂಡಳು. ಆದರೆ ಆತನು ಅದಕ್ಕೆ ಒಪ್ಪಲಿಲ್ಲ. ಆಗ ತಕ್ಷಣ ಆಕೆ ತನ್ನ ಬುದ್ಧಿಯನ್ನು ಹರಿತಗೊಳಿಸಿ ಒಂದು ಉಪಾಯವನ್ನು ಮಾಡಿ ಹೀಗೆ ಹೇಳಿದಳು: ಓ ಸ್ವಾಮಿ, ನಿಮ್ಮನು ನೋಡಿದಾಗಲೇ ನಾನು ಮನಸೋತಿದ್ದೆ. ಅದರಿಂದಾಗಿಯೇ ನಿಮ್ಮನ್ನು ಉಳಿಸಿದ್ದೆ. ನಾನು ಆಗಿನಿಂದಲೂ ನಿಮ್ಮ ಹಿತೈಷಿಯೇ ಆಗಿದ್ದೇನೆ. ಆದ್ದರಿಂದಾಗಿ ನಿಮಗೆ ಗೌರವ ಅಪರ್ಿಸಲು ಕೊನೆಯ ಅವಕಾಶವನ್ನು ನೀಡಿ ಸ್ವಾಮಿ ಎಂದಳು. ಆತನು ಅಪ್ಪಣೆ ನೀಡಿದನು. ಆಕೆಯ ಆತನನ್ನು ಬೆಟ್ಟದ ತುದಿಯಲ್ಲಿ ನಿಲ್ಲಿಸಿ ಮೂರುಬಾರಿ ಆತನನ್ನು ಪ್ರದಕ್ಷಿಣೆ ಮಾಡಿದಳು ಮತ್ತು ನಾಲ್ಕು ದಿಕ್ಕುಗಳಿಗೂ ವಂದಿಸಿದಳು ಹಾಗು ಹೀಗೆ ಹೇಳಿದಳು: ಪತಿಯೇ, ಇದೇ ಅಂತಿಮಬಾರಿ ನಿಮ್ಮನ್ನು ನೋಡುವುದು, ಮುಂದೆ ಕಾಣಲಾರೆ ಎಂದು ಹೇಳಿ ಮುಂದೆ ಮತ್ತು ಹಿಂದಿನಿಂದ ಅಲಂಗಿಸುವ ನೆಪದಲ್ಲಿ, ಹಿಂದಿನಿಂದ ಆತನ ಭುಜದ ಬಳಿ ಮತ್ತು ಬೆನ್ನಿನ ಬಳಿ ಅಂಗೈನಿಂದ ಜೋರಾಗಿ ನೂಕಿಬಿಟ್ಟಳು. ಆತನು ಬೆಟ್ಟದ ಮೇಲಿನಿಂದ ಬಿದ್ದು ಸತ್ತನು. ಆಗ ಆ ಪರ್ವತದಲ್ಲಿದ್ದ ದೇವನೊಬ್ಬನು ಈ ಗಾಥೆಯನ್ನು ನುಡಿದನು: ಬುದ್ಧಿವಂತಿಕೆಯು ಕೇವಲ ಪುರುಷರ ಎಲ್ಲೆಯಲ್ಲಿಯೇ ಇರುವುದಿಲ್ಲ. ಸ್ತ್ರೀಯು ಸಹಾ ಬುದ್ಧವಂತಳೇ ಆಗಿದ್ದಾಳೆ. ಆಕೆಯು ಸಹಾ ತನ್ನ ಪ್ರತಾಪವನ್ನು ಕಾಲ ಒದಗಿದಾಗ ತೋರಿಸುತ್ತಾಳೆ.
                ಈ ಘಟನೆಯ ನಂತರ ಆಕೆಗೆ ಮನೆಗೆ ಪುನಃ ಹಿಂತಿರುಗುವ ಆಸೆಯು ಇರಲಿಲ್ಲ. ಆಕೆಯು ತನ್ನ ಎಲ್ಲಾ ಆಭರಣಗಳನ್ನು ಮರವೊಂದಕ್ಕೆ ನೇತುಹಾಕಿ, ನಡೆದಾಡುತ್ತ ಪರಿಬ್ಬಾಜಿಕ ಎಂದು ಕರೆಸಿಕೊಳ್ಳುವ ಸ್ತ್ರೀ ಸಂನ್ಯಾಸಿಯರ ಗುಂಪನ್ನು ಸೇರಿದಳು. ಅಲ್ಲಿ ಆಕೆ ವಿತಂಡವಾದದ ಕೌಶಲ್ಯವೆಲ್ಲಾ ಕಲಿತಳು. ಅಲ್ಪಕಾಲದಲ್ಲೇ ಅಪಾರ ಬುದ್ಧಿವಂತೆ ಯಾದಳು. ಆಗ ಆಕೆಯ ಗುರುವು ಹೀಗೆ ಹೇಳಿದರು: ಹೋಗು ತಂಗಿಯೇ, ನೀನು ಅಪ್ರತಿಮ ಜ್ಞಾನವನ್ನು ಗಳಿಸಿರುವೆ, ಇಡೀ ಜಂಬುದ್ವೀಪ ತಿರುಗಾಡು, ಈ ಪನ್ನೀರಿನ ಕೊಂಬೆಯನ್ನು ತೆಗೆದುಕೊಂಡು ಹೋಗಿ ಪ್ರತಿ ನಗರದಲ್ಲಿ ನೆಲದಲ್ಲಿ ನೆಟ್ಟು, ವಾದಕ್ಕೆ ಆಹ್ವಾನಿಸು, ಎಲ್ಲರನ್ನೂ ಸೋಲಿಸಿಕೊಂಡು ಹೋಗು, ನಿನ್ನನ್ನು ಯಾರಾದರೂ ಗೃಹಸ್ಥ ಸೋಲಿಸಿದರೆ ಆತನ ಚರಣದಾಸಿಯಾಗು ಅಥವಾ ನಿನ್ನನ್ನು ಯಾವುದಾದರೂ ಭಿಕ್ಷು ಸೋಲಿಸಿದರೆ, ಆತನ ಶಿಷ್ಯೆಯಾಗು.
                ಆಕೆಯು ಅದರಂತೆ ಎಲ್ಲೆಡೆ ತನ್ನ ವಾದ ಪ್ರಚಂಡತೆಯನ್ನು ಮೆರೆದಳು. ಆಕೆಯ ಬಗ್ಗೆಯಾಗಲೀ, ಆಕೆಯ ಪನ್ನೀರಿನ ಕೊಂಬೆಯನ್ನು ನೋಡಿದರೂ ಸಹಾ ವಿದ್ವಾಂಸ ಜನರು ಪರಾರಿಯಾಗುತ್ತಿದ್ದರು. ಹೀಗೆ ಆಕೆಯ ಖ್ಯಾತಿಯು ಎಲ್ಲೆಡೆ ಹಬ್ಬಿತ್ತು. ಒಮ್ಮೆ ಧಮ್ಮ ಸೇನಾನಿ ಸಾರಿಪುತ್ರರು ಪನ್ನೀರಿನ ಕೊಂಬೆಯ ಸುತ್ತಲು ಜನರಿದ್ದುದನ್ನು ಕಂಡು ವಿಚಾರಿಸಿದಾಗ ವಿಷಯ ತಿಳಿಯಿತು. ಆಗ ಅವರು ಅಲ್ಲಿದ್ದ ಹುಡುಗರಿಗೆ ಆ ಕೊಂಬೆಯನ್ನು ಕಾಲಲ್ಲಿ ಹೊಸಕಲು, ಹೇಳಿ ಹೋದರು. ಅದರಂತೆ ಆ ಹುಡುಗರು ಮಾಡಿದರು.
                ಸ್ವಲ್ಪಕಾಲದ ನಂತರ ಆ ಯುವತಿಗೆ ವಿಷಯ ತಿಳಿದು ಸಾರಿಪುತ್ರರ ಬಳಿಗೆ ಬಂದಳು. ಅವರೊಂದಿಗೆ ವಾದವಿವಾದಕ್ಕೆ ಇಳಿದಳು. ಅವರಿಗೆ ಸಾವಿರ ಪ್ರಶ್ನೆಗಳು ಹಾಕಿದಳು. ಸಾರಿಪುತ್ರರು ಎಲ್ಲದಕ್ಕೂ ಸರಿ ಉತ್ತರ ನೀಡಿದರು. ಇನ್ನು ಆಕೆಯ ಬಳಿ ಯಾವ ಪ್ರಶ್ನೆಯು ಇರಲಿಲ್ಲ. ಆಗ ಸಾರಿಪುತ್ರರು ಆಕೆಗೆ ಒಂದು ಪ್ರಶ್ನೆ ಕೇಳಿದರು: ಒಂದು ಏನನ್ನು ಸೂಚಿಸುತ್ತದೆ?
                ಆಗ ಆಕೆಯು ಉತ್ತರಿಸಲಾಗದೆ ಉತ್ತರ ಪಡೆಯಲು ಭಿಕ್ಷುಣಿಯಾಗಿ, ಭಿಕ್ಷುಣಿ ಕುಂಡಲಕೇಸಿಯಾದಳು. ನಂತರ ಸಾರಿಪುತ್ರರು ಹೇಳಿದ್ದನ್ನು, ಅದರಂತೆಯೇ ನಡೆದುಕೊಂಡು, ಸಾಧಿಸಿ ಕೆಲದಿನಗಳಲ್ಲಿಯೇ ಅರಹಂತೆಯಾದಳು.
                ಇದನ್ನು ಕಂಡ ಭಿಕ್ಷುಗಳಿಗೆ ಆಶ್ಚರ್ಯವಾಯಿತು. ಹೇಗೆ ತಾನೇ ಅತ್ಯಲ್ಪ ಬೋಧನೆಯಲ್ಲಿ ಅರಹಂತತನವನ್ನು ಪಡೆಯಲು ಸಾಧ್ಯ?

                ಆಗ ಬುದ್ಧ ಭಗವಾನರು ಈ ಮೇಲಿನ ಗಾಥೆಗಳನ್ನು ಹೇಳಿದರು.

No comments:

Post a Comment